ಕುಂದಾಪುರ: ಕಳೆದ ಎಂಟು ದಿನಗಳ ಹಿಂದೆ ತನ್ನ ಸಹೋದರನಿಂದಲೇ ಗಂಭೀರ ಹಲ್ಲೆಗೊಳಗಾಗಿದ್ದ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.
ತಾಲೂಕಿನ ವಡೇರಹೊಬಳಿ ಗ್ರಾಮದ ಕುಂದೇಶ್ವರ ದೇವಸ್ಥಾನ ಹಿಂಭಾಗದ ನಿವಾಸಿ, ಶೀನ ಭಂಡಾರಿಯವರ ಪುತ್ರಿ ವಿಜಯಾ ಭಂಡಾರಿ (50) ಸೋದರನಿಂದ ಹಲ್ಲೆಗೊಳಗಾಗಿ ಮೃತಪಟ್ಟವರು. ವಿಜಯಾ ಅವರ ಸಹೋದರ ಅಣ್ಣಪ್ಪ ಭಂಡಾರಿ (45) ಯನ್ನು ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸರು ಬಂಧಿಸಿದ್ದು, ಆತ ಮಂಗಳೂರು ಜೈಲಿನಲ್ಲಿದ್ದಾನೆ.
ಘಟನೆ ವಿವರ:
ಜುಲೈ 22ರಂದು ರಾತ್ರಿ ವಿಜಯಾ ಅವರು ಮನೆಯಲ್ಲಿದ್ದಾಗ ಅವರ ಸಹೋದರ ಅಣ್ಣಪ್ಪ ಭಂಡಾರಿ ಕುಡಿದು ಬಂದು ದುಡ್ಡಿನ ವಿಚಾರದಲ್ಲಿ ತಗಾದೆ ತೆಗೆಯುತ್ತಾನೆ. ಒಂದಷ್ಟು ಹೊತ್ತು ರಂಪಾಟ ಮಾಡಿದ ಅಣ್ಣಪ್ಪ ಸಿಟ್ಟಿನಲ್ಲಿ ವಿಜಯಾ ಅವರಿಗೆ ಕತ್ತಿಯಲ್ಲಿ ಹಲ್ಲೆ ನಡೆಸುತ್ತಾನೆ. ಹಲ್ಲೆಯಿಂದ ಕುತ್ತಿಗೆ ಹಾಗೂ ಬೆನ್ನಿನ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು ರಕ್ತ ಮಡುವಿನಲ್ಲಿ ಬಿದ್ದ ಅವರನ್ನು ಸಂಬಂಧಿಗಳು ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ವೈದ್ಯರು ಕುಂದಾಪುರ ಪೊಲೀಸರಿಗೆ ನೀಡಿದ ವರ್ತಮಾನದಂತೆ ಪೊಲೀಸರು ಆಸ್ಪತ್ರೆಗೆ ತೆರಳಿ ವಿಜಯಾ ಅವರ ಹೇಳಿಕೆ ಪಡೆದು ಅಣ್ಣಪ್ಪ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಬಂಧಿಸುತ್ತಾರೆ. ಆದರೆ ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯಾ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮುಂಜಾನೆ ಸಾವನ್ನಪ್ಪಿದ್ದಾರೆ.
ಇನ್ನು ಅಣ್ಣಪ್ಪ ಭಂಡಾರಿ ಸಂಗಮ್ ಬಳಿ ಕ್ಷೌರದಂಗಡಿ ಹೊಂದಿದ್ದು, ವಿಪರೀತ ಕುಡಿತದ ಚಟ ಹೊಂದಿದ್ದ ಎನ್ನಲಾಗಿದೆ. ಸದ್ಯ ಗಂಭೀರ ಹಲ್ಲೆ ಪ್ರಕರಣವನ್ನು ಕೊಲೆ ಪ್ರಕರಣವನ್ನಾಗಿ ಬದಲಾಯಿಸಿಕೊಂಡು ಕುಂದಾಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Comments are closed.