ರಾಷ್ಟ್ರೀಯ

ಅಪಾಯದ ಮಟ್ಟ ಮೀರಿದ ಯಮುನಾ, 10 ಸಾವಿರ ಮಂದಿ ಸ್ಥಳಾಂತರ

Pinterest LinkedIn Tumblr


ಹೊಸದಿಲ್ಲಿ: ಹಲವು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಮಳೆಯಾತ್ತಿರುವ ಹಿನ್ನೆಲೆಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ನದಿ ಪಾತ್ರದಲ್ಲಿ ವಾಸವಿರುವವರನ್ನು ಸರ್ಕಾರ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ.

ಉತ್ತರಾಖಂಡ, ಹಿಮಾಚಲ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಮತ್ತು ಹಾಥಿಕುಂಡ್​ ಬ್ಯಾರೇಜ್​ನಿಂದ ಅತ್ಯಧಿಕ ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ದೆಹಲಿ ಬಳಿ 205.20 ಮೀಟರ್‌ ಮಟ್ಟದಲ್ಲಿ ಯಮುನೆ ಹರಿಯುತ್ತಿದ್ದು, ನದಿ ಪಾತ್ರದ ಜನರಿಗೆ ಸರ್ಕಾರ ಅಪಾಯದ ಮುನ್ಸೂಚನೆ ನೀಡಿದೆ. ಇದೇ ಹಿನ್ನೆಲೆಯಲ್ಲಿ ಜನರ ಸ್ಥಳಾಂತರಗೊಳಿಸುವ ಕಾರ್ಯವನ್ನೂ ಆರಂಭಿಸಲಾಗಿದೆ. ಈ ವರೆಗೆ 10000 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.
ಈ ನಡುವೆ ಶನಿವಾರ ಬೆಳಗ್ಗೆ ಹಾಥಿಕುಂಡ್​ ಬ್ಯಾರೇಜ್​ನಿಂದ 2 ಲಕ್ಷ ಕ್ಯುಸೆಕ್​ ನೀರನ್ನು ನದಿಗೆ ಬಿಡಲಾಗಿದ್ದು, ಆತಂಕ ಮತ್ತಷ್ಟು ಹೆಚ್ಚಾಗಿದೆ. ಎಲ್ಲ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ಗಳನ್ನು ಆಯಾ ವಿಭಾಗದಲ್ಲಿನ ಪರಿಸ್ಥಿತಿ ಬಗ್ಗೆ ನಿಗಾ ಇರಿಸಲು ಸೂಚಿಸಲಾಗಿದೆ. ಕಂಟ್ರೋಲ್‌ ರೂಂ ಜತೆಗೆ ಸಂಪರ್ಕದಲ್ಲಿರುವಂತೆಯೂ ತಿಳಿಸಲಾಗಿದೆ. ಪ್ರವಾಹ ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಹೀಗಿರುವಾಗಲೇ ಮುಂದಿನ ಕೆಲ ದಿನಗಳ ಕಾಲ ದಿಲ್ಲಿ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಭಾರಿ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

Comments are closed.