ಅಂತರಾಷ್ಟ್ರೀಯ

ಪಾಕ್​ ಅಸೆಂಬ್ಲಿಗೆ ಆಯ್ಕೆಯಾದ ಮೊದಲ ಪಾಕಿಸ್ತಾನಿ ಹಿಂದು ಮಹೇಶ್​ ಕುಮಾರ್

Pinterest LinkedIn Tumblr


ಇಸ್ಲಾಮಾಬಾದ್‌: ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ನೀಡಿದ 16 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಹಿಂದು ಅಭ್ಯರ್ಥಿಯೊಬ್ಬರು ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯಿಂದ ರಾಷ್ಟ್ರೀಯ ಅಸೆಂಬ್ಲಿಗೆ ಆಯ್ಕೆಯಾಗಿದ್ದಾರೆ.

ದಕ್ಷಿಣ ಸಿಂಧ್ ಪ್ರಾಂತ್ಯದ ರಾಷ್ಟ್ರೀಯ ಅಸೆಂಬ್ಲಿ(NA-222)ಗೆ ತರ್ಪಾರ್ಕರ್-2 ಕ್ಷೇತ್ರದಿಂದ ಮಹೇಶ್ ಕುಮಾರ್ ಮಲಾನಿ ಸ್ಪರ್ಧಿಸಿದ್ದರು. ಕಣದಲ್ಲಿದ್ದ 14 ಅಭ್ಯರ್ಥಿಗಳನ್ನು ಸೋಲಿಸಿರುವ ಮಹೇಶ್‌ ಮೊದಲ ಬಾರಿಗೆ ಜಯ ಸಾಧಿಸಿದ್ದಾರೆ.

ತನ್ನ ಪ್ರತಿಸ್ಪರ್ಧಿ ಗ್ರಾಂಡ್‌ ಡೆಮಾಕ್ರಟಿಕ್‌ ಅಲಯನ್ಸ್‌ನ ಅಭ್ಯರ್ಥಿ ಅರಬ್‌ ಜಕಾಉಲ್ಲಾಹ್‌ ವಿರುದ್ಧ 1,06,630 ಮತಗಳನ್ನು ಪಡೆದಿರುವ ಮಹೇಶ್‌ 87,251 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ರಾಜಸ್ಥಾನಿ ಪುಷ್ಕಾರ್ನಾ ಬ್ರಾಹ್ಮಣ ರಾಜಕಾರಣಿಯಾದ ಮಲಾನಿ ಅವರು ಈ ಮೊದಲು 2003-08ರಲ್ಲಿ ಪಿಪಿಪಿಯಿಂದ ನಾಮನಿರ್ದೇಶನಗೊಂಡು ಸಂಸತ್ತಿನ ಸದಸ್ಯರಾಗಿದ್ದರು.

2013 ರಲ್ಲಿ ಸಿಂಧ್ ವಿಧಾನಸಭೆಯ ಥಾರ್‌ಪಾಕರ್‌ -3ನಲ್ಲಿ ಸಾಮಾನ್ಯ ಸ್ಥಾನವನ್ನು ಗೆದ್ದ ಬಳಿಕ ಮಹೇಶ್‌ ಮಲಾನಿ ಅವರು ಪ್ರಾಂತೀಯ ಅಸೆಂಬ್ಲಿಯ ಮೊದಲ ಮುಸ್ಲಿಮೇತರ ಸದಸ್ಯರಾಗಿದ್ದರು. ಕಳೆದ ಸರ್ಕಾರದ ಅಧಿಕಾರಾವಧಿಯಲ್ಲಿ ಆಹಾರ ಸಮಿತಿ ಅಧ್ಯಕ್ಷ ಸ್ಥಾನವೂ ಸೇರಿದಂತೆ ನಾನಾ ಸ್ಥಾಯಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

2002ರಲ್ಲಿ ಅಂದಿನ ರಾಷ್ಟ್ರಪತಿ ಜನರಲ್‌ ಪರ್ವೇಜ್‌ ಮುಷರಫ್‌ ಮಸೂದೆಯೊಂದನ್ನು ರಚಿಸಿ ಸಂವಿಧಾನದಲ್ಲಿ ತಿದ್ದುಪಡಿ ತಂದ ಬಳಿಕ ಮುಸ್ಲಿಮೇತರರು ಸಂಸತ್ತು ಮತ್ತು ಪ್ರಾಂತೀಯ ಅಸೆಂಬ್ಲಿಯಲ್ಲಿ ಮತ ಚಲಾಯಿಸುವ ಮತ್ತು ಚುನಾವಣೆಗೆ ಸ್ಪರ್ಧಿಸುವ ಅಧಿಕಾರವನ್ನು ನೀಡಲಾಗಿತ್ತು. ಇದಲ್ಲದೆ ಸೆನೆಟ್, ರಾಷ್ಟ್ರೀಯ ಮತ್ತು ಪ್ರಾಂತೀಯ ಅಸೆಂಬ್ಲಿಗಳಲ್ಲಿ ಮೀಸಲು ಸ್ಥಾನಗಳನ್ನು ಹೊಂದಿದ್ದಾರೆ.

Comments are closed.