ಅಹಮದಾಬಾದ್: ಬರೋಬ್ಬರಿ 28 ವರ್ಷಗಳ ಕಾನೂನು ಹೋರಾಟದ ಬಳಿಕ ಗುಜರಾತ್ನ ಅರಣ್ಯ ಇಲಾಖೆಯ ಉದ್ಯೋಗಿಯೋರ್ವರು ಕೊನೆಗೂ ತಮ್ಮ ವೇತನ ಪಡೆಯಲಿದ್ದಾರೆ.
ಜುಲೈ 7, 1990ರಿಂದ ಸೆ. 3, 2015ರವರೆಗೆ ಅಶೋಕ್ ರಾಥೋಡ್ ಎಂಬವರಿಗೆ ಅವರು ಉದ್ಯೋಗವಿಲ್ಲದೆ ಕಳೆದ ದಿನಗಳಿಗೆ (ಸುಮಾರು 25 ವರ್ಷ) ಸೂಕ್ತ ವೇತನ ಪಾವತಿಸುವಂತೆ ಕಾರ್ಮಿಕ ನ್ಯಾಯಾಲಯ ಏ. 24ರಂದು ಆದೇಶಿಸಿದೆ.
ಅರಣ್ಯ ಇಲಾಖೆಯಲ್ಲಿ ಉದ್ಯಾನಪಾಲಕನಾಗಿ ದಿನಗೂಲಿ ನೌಕರನಾಗಿದ್ದ ಅಶೋಕ್ರನ್ನು ಇಲಾಖೆ 240 ದಿನಗಳ ಕಾಲ ಉದ್ಯೋಗದ ಅವಧಿ ಪೂರ್ತಿಗೊಳಿಸದ ಹಿನ್ನೆಲೆಯಲ್ಲಿ ಕೆಲಸದಿಂದ ತೆಗೆದುಹಾಕಿತ್ತು. ಆದರೆ ಅಶೋಕ್ 239.5 ದಿನ ಕೆಲಸ ಮಾಡಿದ್ದರು. ನಿಗದಿಗಿಂತ ಅರ್ಧ ದಿನ ಅವರ ಕೆಲಸ ಕಡಿಮೆಯಾಗಿದ್ದು, ಕೆಲಸದಿಂದ ತೆಗೆದುಹಾಕಲು ಇಲಾಖೆ ನಿರ್ಧರಿಸಿತ್ತು.
ಆದರೆ ಅದಕ್ಕಾಗಿ ಗುಜರಾತ್ ಹೈಕೋರ್ಟ್ ಮತ್ತು ಕಾರ್ಮಿಕ ನ್ಯಾಯಾಲಯದಲ್ಲಿ ಅಶೋಕ್ ಕಾನೂನು ಹೋರಾಟ ಮುಂದುವರಿಸಿದ್ದರು. ಅಲ್ಲದೆ ಬೇರೆ ಕಡೆ ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕೆ ಯತ್ನಿಸಿದ್ದರೂ, ಇಲ್ಲಿ ಕೆಲಸ ಕಳೆದುಕೊಂಡಿದ್ದರಿಂದ ಖಾಸಗಿಯವರು ಕೆಲಸ ಕೊಡಲು ಒಪ್ಪಿರಲಿಲ್ಲ.
ಆದರೆ ಆರ್ಟಿಐ ಕಾಯ್ದೆ ಜಾರಿಯಾದ ಬಳಿಕ, ಕಾರ್ಯಕರ್ತರ ನೆರವಿನೊಂದಿಗೆ ತಮ್ಮ ಹಾಜರಾತಿಯ ವಿವರ ಪಡೆದುಕೊಂಡ ಅಶೋಕ್ ಅದನ್ನಿಟ್ಟುಕೊಂಡು ಕಾನೂನು ಹೋರಾಟ ಮುಂದುವರಿಸಿದ್ದರು. ಆರ್ಟಿಐ ಅರ್ಜಿಯಲ್ಲಿ ದೊರೆತ ಮಾಹಿತಿ ಪ್ರಕಾರ, ಇಲಾಖೆಯ ನಿಗದಿತ 240 ದಿನಗಳಿಗಿಂತ ಹೆಚ್ಚುವರಿ 20 ದಿನ ಅಶೋಕ್ ಕೆಲಸ ಮಾಡಿದ್ದಾರೆ.
ಹೀಗಾಗಿ ಅವರನ್ನು ನಿಯಮಬಾಹಿರವಾಗಿ ಕೆಲಸದಿಂದ ತೆಗೆದುಹಾಕಲಾಗಿದೆ ಮತ್ತು ಕೊಡಬೇಕಾದ ವೇತನ ಕೂಡ ನೀಡಿಲ್ಲ. ಹೀಗಾಗಿ ಅವರು ಕೆಲಸವಿಲ್ಲದೆ ಕಳೆದ 25 ವರ್ಷಗಳ ವೇತನ ಮತ್ತು ಮತ್ತೆ ಕೆಲಸಕ್ಕೆ ಸೇರ್ಪಡೆ ಹಾಗೂ ನಿವೃತ್ತಿವರೆಗೆ ಕೆಲಸ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ.
Comments are closed.