ನ್ಯೂಯಾರ್ಕ್ : ದೇಶ ವಿದೇಶಗಳಲ್ಲಿ ಜನಪ್ರಿಯರಾಗಿರುವ ಭಾರತೀಯ ಯೋಗ ಗುರು ಬಾಬಾ ರಾಮ್ ದೇವ್ ಅವರನ್ನು ನ್ಯೂಯಾರ್ಕ್ ಟೈಮ್ಸ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಹೋಲಿಸಿದೆ; ಮಾತ್ರವಲ್ಲ ಬಾಬಾ ರಾಮ್ ದೇವ್ ಅವರು ಭಾರತದ ಭವಿಷ್ಯತ್ತಿನ ಪ್ರಧಾನಿ ಎಂದು ವರ್ಣಿಸಿದೆ.
ಬಾಬಾ ರಾಮ್ ದೇವ್ ಅವರು ಯೋಗದ ಮೂಲಕ ಮತ್ತು ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆದಿರುವ ಆಯುರ್ವೇದ ಉತ್ಪನ್ನಗಳ ತಮ್ಮ ಪತಂಜಲಿ ಸಂಸ್ಥೆಯಿಂದ ದೇಶ ವಿದೇಶಗಳಲ್ಲಿ ಪ್ರಖ್ಯಾತರಾಗಿದ್ದಾರೆ. ಹಾಗಿದ್ದರೂ ಅವರನ್ನು ಈ ತನಕ ಯಾರೇ ಆದರೂ ವಿವಾದಾತ್ಮಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗೆ ಹೋಲಿಸಿದ್ದಿಲ್ಲ. ಆದರೆ ನ್ಯೂಯಾರ್ಕ್ ಟೈಮ್ಸ್ ಈಗ ಆ ಧೈರ್ಯ ಮಾಡಿದೆ !
“ನರೇಂದ್ರ ಮೋದಿ ಅವರ ಉನ್ನತಿಯ ಹಿಂದಿರುವ ಬಿಲಿಯಾಧಿಪತಿ ಯೋಗಿ ಬಾಬಾ ರಾಮ್ ದೇವ್ ಅವರು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತದ ಉತ್ತರವೆಂಬಂತೆ ಇದ್ದಾರೆ; ದೇಶವನ್ನು ಬದಲಾಯಿಸಬಲ್ಲ ಕ್ರಾಂತಿಕಾರಿ; ಇವರೇ ಭವಿಷ್ಯತ್ತಿನ ಭಾರತದ ಪ್ರಧಾನಿ’ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ.
ಬಾಬಾ ರಾಮ್ ದೇವ್ ಅವರನ್ನು ಟ್ರಂಪ್ ಗೆ ಹೋಲಿಸುವಲ್ಲಿ ಕೆಲವೊಂದು ಸಮಾನ ಅಂಶಗಳನ್ನು ಕಂಡುಕೊಂಡಿರುವ ನ್ಯೂಯಾರ್ಕ್ ಟೈಮ್ಸ್, “ಟ್ರಂಪ್ ಅವರಂತೆ ಬಾಬಾ ರಾಮ್ ದೇವ್ ಬಹು ಶತಕೋಟಿ ಡಾಲರ್ ಉದ್ಯಮದ ಒಡೆಯರು; ಟ್ರಂಪ್ ಅವರಂತೆ ರಾಮ್ ದೇವ್ ಕೂಡ ಬೊಂಬಾಟ್ ಟಿವಿ ವ್ಯಕ್ತಿತ್ವ ಹೊಂದಿದವರು; ಸತ್ಯದೊಂದಿಗಿನ ಇವರ ಬಾಂಧವ್ಯ ಸಲೀಸು; ಬ್ರಾಂಡಿಂಗ್ ಅವಕಾಶವನ್ನು ಎಂದೂ ಕಳೆದುಕೊಳ್ಳದವರು; ಬಾಬಾ ಅವರ ಹೆಸರು ಮತ್ತು ಮುಖ ಭಾರತದ ಆದ್ಯಂತ ನೆಲೆಗೊಂಡಿದೆ’.
“ಹಾಗಿದ್ದರೂ ಬಾಬಾ ರಾಮ್ ದೇವ್ ಅವರಿಗೆ ರಾಜಕೀಯ ಕಾರ್ಯಾಲಯ ಇಲ್ಲ; ಬಿಜೆಪಿ ನಾಯಕರೊಂದಿಗೆ ಸಖ್ಯ ಇಲ್ಲ; ಅನೇಕರ ದೃಷ್ಟಿಯಲ್ಲಿ ಅವರೇ ಭಾರತದ ಭವಿಷ್ಯತ್ತಿನ ಪ್ರಧಾನಿ; ಇದ್ದಕ್ಕಿದ್ದಂತೆಯೇ ಕತ್ತಲೆಯಿಂದ ಬೆಳಕಿನೆಡೆಗೆ ನುಗ್ಗಿ ಬರುವ ಗುಣವುಳ್ಳ ವ್ಯಕ್ತಿತ್ವ ಅವರದ್ದು.
Comments are closed.