ಕರಾವಳಿ

ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ: 2 ಲಕ್ಷ ಮೌಲ್ಯದ ಆಭರಣ ಕಳವು

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕಿನ ಬಸ್ರೂರು ಶ್ರೀ ಮಹತೋಬಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸುಮಾರು 2 ಲಕ್ಷ ಮೌಲ್ಯದ ದುರ್ಗಾಪರಮೇಶ್ವರಿ ದೇವಿಯ ಬೆಳ್ಳಿಯ ಮುಖವಾಡ ಮತ್ತು ಗಣಪತಿ ಮುಖವಾಡಗಳನ್ನು ಕಳವು ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಸುಮಾರು 12 ಗಂಟೆಗೆ ಗ್ರಾಮಾಂತರ ಠಾಣೆ ಪೊಲೀಸರು ಗಸ್ತು ಬಂದಿದ್ದು ಆ ಬಳಿಕ ಪ್ರಕರಣ ನಡೆದಿದೆ ಎನ್ನಲಾಗಿದೆ. ದೇವಸ್ಥಾನದ ಮುಖ್ಯ ಗರ್ಭಗುಡಿಯ ಬಾಗಿಲು ಒಡೆದು ಒಳಪ್ರವೇಶಿಸುವ ಮೊದಲು ದೇವಸ್ಥಾನದ ಹೊರ ಆವರಣದಲ್ಲಿರುವ ಅರ್ಚಕರ ಕೊಠಡಿಗೆ ಹೊರಗಿನಿಂದ ಚಿಲಕ ಹಾಕಿದ್ದು ಬಳಿಕ ಕಳವು ಮಾಡಿದ್ದಾರೆ. ಗರ್ಬಗುಡಿಯಲ್ಲಿದ್ದ ಇತರೇ ಚಿನ್ನಾಭರಣವನ್ನು ಸ್ಟ್ರಾಂಗ್ ರೂಂನಲ್ಲಿಟ್ಟ ಕಾರಣ ಕಳವು ನಡೆದಿಲ್ಲ. ಗರ್ಭಗುಡಿಯಲ್ಲಿ ಸೈರನ್ ಇರುವುದು ಅರಿಯದ ಕಳ್ಳರು ಗರ್ಭಗುಡಿಗೆ ನುಗ್ಗಿದ್ದು ಅಲ್ಲಿ ಬೆಳ್ಳಿಯಾಭರಣ ಕಳವುಗೈದಿದ್ದು ಸೈರನ್ ಶಬ್ದ ಕೇಳಿದಾಗ ಕಳ್ಳರು ಪರಾರಿಯಾಗಿದ್ದಾರೆ. ಇನ್ನು ಕಳ್ಳರು ದೇವಿ ಗುಡಿಯಲ್ಲಿ ಕದ್ದ ಬಳಿಕ ಬೆರಳಚ್ಚು ಬೀಳದಂತೆ ಬಟ್ಟೆಯಿಂದ ಅಳಿಸಿದ್ದಾರೆನ್ನಲಾಗಿದೆ. ಮೇಲ್ನೋಟಕ್ಕೆ ಪ್ರೊಪೇಶನಲ್ ಕಳ್ಳರು ಇವರಾಗಿದ್ದಾರೆಂಬುದು ಸ್ಥಳೀಯರ ಅಭಿಪ್ರಾಯ.

ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಕುಂದಾಪುರ ಗ್ರಾಮಾಂತರ ಠಾಣೆ ಎಸ್ಐ ಶ್ರೀಧರ್ ನಾಯ್ಕ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ನರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್, ಸಿಪಿಐ ಮಂಜಪ್ಪ ಡಿ.ಆರ್. ಮೊದಲಾದ ಅಧಿಕಾರಿಗಳು ಭೇಟಿ ನೀಡಿದ್ದು ಸಿ.ಸಿ. ಕ್ಯಾಮೆರಾ ಮೊದಲಾದ ಕುರುಹುಗಳ ಪರಿಶೀಲನೆ ನಡೆಸಿದ್ದಾರೆ.

ಕುಂದಾಪುರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.