ಕರ್ನಾಟಕ

ಪೆರೋಲ್ ಮೇಲೆ ಬಂದು ಪರಾರಿಯಾಗಿದ್ದ ಆರೋಪಿ 8 ವರ್ಷಗಳ ಬಳಿಕ ಸೆರೆ

Pinterest LinkedIn Tumblr


ವಿಜಯಪುರ: ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪೆರೋಲ್ ಮೇಲೆ ಆಚೆಗೆ ಬಂದು ಪರಾರಿಯಾಗಿ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಪರಾಧಿಯೊಬ್ಬ ಮತ್ತೆ ಸೆರೆಸಿಕ್ಕಿದ್ದಾನೆ. ಯಾದಗಿರಿಯ ಸೈಯದ್ ಯೂನಿಸ್ ಖಾದ್ರಿ ಅಲಿಯಾಸ್ ಸೈಯದ್ ಇನಾಮ್ದಾರ್ ಬಂಧಿತ ವ್ಯಕ್ತಿಯಾಗಿದ್ದಾನೆ. 2002ರಿಂದಲೂ ಜೈಲುವಾಸ ಅನುಭವಿಸುತ್ತಿದ್ದ ಈತ 2011ರಲ್ಲಿ 30 ದಿನಗಳ ಪೆರೋಲ್ ಮೇಲೆ ಹೊರಗೆ ಹೋಗಿರುತ್ತಾನೆ. ಆ ವರ್ಷದ ಫೆ. 26ರಂದು ಜೈಲಿಗೆ ಹಾಜರಾಗಬೇಕಿದ್ದ ಈತ ವಾಪಸ್ ಬರುವುದೇ ಇಲ್ಲ. ಈ ಸಂಬಂಧ ಗೋಲ್​ಗುಮ್ಮಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಿಜಯಪುರ ಎಸ್​ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತದೆ. ಸಯದ್ ಯೂನಿಸ್ ಖಾದ್ರಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನವನಹಳ್ಳಿಯಲ್ಲಿ ಇರುವ ಮಾಹಿತಿ ಪೊಲೀಸರಿಗೆ ಲಭಿಸುತ್ತದೆ. ಆ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗುವ ಪೊಲೀಸರು ಸಯದ್ ಇನಾಮ್ದಾರ್​ನನ್ನು ಬಂಧಿಸುತ್ತಾರೆ. ಸ್ಥಳೀಯ ನ್ಯಾಯಾಲಯವು ಈತನನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸುತ್ತದೆ. ವಿಜಯಪುರ ಎಸ್​ಪಿ ಪ್ರಕಾಶ್ ನಿಕ್ಕಂ ಅವರು ವಿಜಯಪುರ ಪೊಲೀಸರಿಗೆ ಬಹುಮಾನ ಘೋಷಿಸಿದ್ದಾರೆ.

ಯಾದಗಿರಿಯ ಸುರಪುರ ತಾಲೂಕಿನ ನಾರಾಯಣಪುರದ ನಿವಾಸಿ ಸೈಯದ್ ಯೂನಿಸ್ ಖಾದ್ರಿ ಮೇಲೆ ಯುವತಿಯ ಅಪಹರಣ, ಅತ್ಯಾಚಾರ, ಕೊಲೆ ಹಾಗೂ ಕೊಲೆಯತ್ನ ಪ್ರಕರಣಗಳು ದಾಖಲಾಗಿವೆ. 2002ರಲ್ಲಿ ಈತನನ್ನು ಬಂಧಿಸಲಾಗಿತ್ತು. 2010ರಲ್ಲಿ ಯಾದಗಿರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಈತನಿಗೆ ಜೀವಾವಧಿ ಶಿಕ್ಷೆ ಹಾಗೂ 75 ಸಾವಿರ ರೂ ದಂಡ ವಿಧಿಸಿರುತ್ತದೆ. ಯುವತಿ ಅಪಹರಣ ಮತ್ತು ಅತ್ಯಾಚಾರಣ ಪ್ರಕರಣ ಸಂಬಂಧ ರಾಯಚೂರು ತ್ವರಿತ ನ್ಯಾಯಾಲಯವು 2007ರಲ್ಲಿ ಈತನಿಗೆ 10 ವರ್ಷ ಜೈಲು ಹಾಗೂ 20 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿರುತ್ತದೆ.

ಪೆರೋಲ್​ನಿಂದ ಆಚೆ ಬಂದ ನಂತರ ಈತ ತೆಲಂಗಾಣಕ್ಕೆ ತಪ್ಪಿಸಿಕೊಂಡು ಹೋಗಿದ್ದನೆನ್ನಲಾಗಿದೆ.

Comments are closed.