ಕರಾವಳಿ

ಎಂಆರ್‌ಪಿಎಲ್‌ ಫ್ಯೂಯೆಲ್ ಆಯಿಲ್ ಸಾಗಾಟದ ಪೈಪ್‌ಲೈನ್‌ನಲ್ಲಿ ಸೋರಿಕೆ : ಬೇಜವಾಬ್ದಾರಿತನ ಕಾರಣ -ಆರೋಪ

Pinterest LinkedIn Tumblr

ಮಂಗಳೂರು, ಆಗಸ್ಟ್.1: ಎಂಆರ್‌ಪಿಎಲ್‌ ಕಂಪನೆಗೆ ಸೇರಿದ ಫ್ಯೂಯೆಲ್ ಆಯಿಲ್ ಸಾಗಾಟದ ಪೈಪ್‌ಲೈನ್‌‌ನಲ್ಲಿ ಸೋರಿಕೆ ಉಂಟಾಗಿದ್ದು, ಘಟನೆ ಮಂಗಳವಾರ ರಾತ್ರಿ ಬೆಳಕಿಗೆ ಬಂದಿದೆ.

ಎಂಆರ್‌ಪಿಎಲ್‌ನಿಂದ ಎನ್‌ಎಂಪಿಟಿಗೆ ಫ್ಯೂಯೆಲ್ ಆಯಿಲ್ ಸಾಗಾಟದ ಪೈಪ್‌ಲೈನ್‌ನಲ್ಲಿ ಎಸ್.ಇ.ಝೆಡ್. ರಸ್ತೆಯಲ್ಲಿರುವ ಅದಾನಿ ಕಂಪೆನಿ ಬಳಿ ಸೋರಿಕೆ ಉಂಟಾಗಿದೆ. ಪಣಂಬೂರಿನ ಕುದುರೆಮುಖ ಕಂಪೆನಿ ಸಮೀಪದಿಂದ ಫಲ್ಗುಣಿ ನದಿ ತೀರವಾಗಿ ಜೋಕಟ್ಟೆಗೆ ಹೋಗುವ ಒಳರಸ್ತೆಯಲ್ಲಿ ಈ ಘಟನೆ ನಡೆದಿದೆ.

ಕಳೆದ ಎರಡು-ಮೂರು ದಿನಗಳಿಂದ ಈ ಪ್ರದೇಶದಲ್ಲಿ ಫ್ಯೂಯೆಲ್ ಆಯಿಲ್ ಸಾಗಾಟದ ಪೈಪ್‌ಲೈನ್‌ನಲ್ಲಿ ಸೋರಿಕೆ ಕಂಡುಬಂದಿದ್ದರೂ, ನಿನ್ನೆ ರಾತ್ರಿಯಷ್ಟೇ ಎಂಆರ್‌ಪಿಎಲ್ ಕಂಪೆನಿಯ ಗಮನಕ್ಕೆ ಬಂದಿದೆ. ಇದೀಗ ಸೋರಿಕೆಯಾಗುತ್ತಿರುವ ಸ್ಥಳದಲ್ಲಿ ಕಾರ್ಯಾಚರಣೆ ಆರಂಭಿಸಿರುವ ಎಂಆರ್‌ಪಿಎಲ್ ಕಂಪೆನಿ, ಸೋರಿಕೆಯನ್ನು ತಡೆಗಟ್ಟಲು ಸೂಕ್ತ ಕ್ರಮಕ್ಕೆ ಮುಂದಾಗಿದೆ.

ಕಂಪನಿಯ ಬೇಜವಾಬ್ದಾರಿತನವೇ ಕಾರಣ : ಮುನೀರ್ ಕಾಟಿಪಳ್ಳ ಆರೋಪ

ಎಂಆರ್‌ಪಿಎಲ್‌ನಿಂದ ಎನ್‌ಎಂಪಿಟಿಗೆ ಫ್ಯೂಯೆಲ್ ಆಯಿಲ್ ಸಾಗಿಸುವ ಪೈಪ್ ಲೈನ್ ನಲ್ಲಿ ಎಸ್.ಇ.ಝೆಡ್. ರಸ್ತೆಯಲ್ಲಿರುವ ಅದಾನಿ ಕಂಪೆನಿ ಬಳಿ ಸೋರಿಕೆ ಕಂಡುಬಂದಿದೆ. ಕಟ್ಟುನಿಟ್ಟಿನ ನಿರಂತರ ತಪಾಸಣೆಯಲ್ಲಿ ಇರಬೇಕಾದ ಈ ಕೊಳವೆ ಮಾರ್ಗದಲ್ಲಿ ಕಳೆದ ಕೆಲವು ದಿನಗಳ ಹಿಂದೆಯೇ ಸೋರಿಕೆ ಕಾಣಿಸಿಕೊಂಡಿದ್ದರೂ ಎರಡು ದಿನಗಳ ಹಿಂದೆಯಷ್ಟೇ ಇದು ಕಂಪೆನಿಯ ಗಮನಕ್ಕೆ ಬಂದಿದೆ.

ಆದರೆ ಸೋರಿಕೆ ಆಗುತ್ತಿರುವ ನಿರ್ದಿಷ್ಟ ಸ್ಥಳವನ್ನು ಗುರುತಿಸಲು ಕಂಪೆನಿಗೆ ಇದುವರೆಗೂ ಸಾಧ್ಯವಾಗಿಲ್ಲ. ಇದು ಪರಿಸರದಲ್ಲಿ‌ ಅಪಾಯಕಾರಿ ಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ. ಈ ಘಟನೆಗೆ ಎಂಆರ್‌ಪಿಎಲ್‌ ಬೇಜವಾಬ್ದಾರಿತನವೇ ಕಾರಣ ಎಂದು ಡಿವೈಎಫ್‌ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಈ ಪೈಪ್ ಲೈನ್ ಫಲ್ಗುಣಿ ನದಿಯ ದಂಡೆಯಲ್ಲಿ ಸಾಗಿರುವುದರಿಂದ ಪೆಟ್ರೋಕೆಮಿಕಲ್ ನದಿ ನೀರನ್ನು ಸೇರಿರುವ ಅಪಾಯ ಕಾಣಿಸುತ್ತಿದೆ. ಈಗಿನ ಸೋರಿಕೆ ಬಹಿರಂಗಗೊಂಡು ಎರಡು ದಿನಗಳಾದರೂ ಸೋರಿಕೆಯ ನಿರ್ದಿಷ್ಟ ಸ್ಥಳವನ್ನು ಗುರುತಿಸಲು ಸಾಧ್ಯವಾಗದಿರುವುದು ಕಂಪೆನಿಯ ಬೇಜವಾಬ್ದಾರಿತನ, ಕಂಪೆನಿಯ ಸುತ್ತಲಿನ ಪರಿಸರ ಎದುರಿಸುತ್ತಿರುವ ಅಪಾಯವನ್ನು ತೆರೆದಿಟ್ಟಿದೆ ಎಂದು ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಖಂಡನೆ ವ್ಯಕ್ತಪಡಿಸಿದ್ದಾರೆ.

Comments are closed.