ನವದೆಹಲಿ: ಏರ್ ಇಂಡಿಯಾದಲ್ಲಿ 38 ವರ್ಷ ಸೇವೆ ಸಲ್ಲಿಸಿದ ಪೂಜಾ ಚಿಂಚಾಕರ್ ಮಂಗಳವಾರ ನಿವೃತ್ತರಾದರು. ಅಂದು ತಮ್ಮ ಮಗಳೇ ಪೈಲಟ್ ಆಗಿದ್ದ ಮುಂಬೈ-ಬೆಂಗಳೂರು-ಮುಂಬೈ ವಿಮಾನದಲ್ಲಿ ತಮ್ಮ ಕೊನೇ ಸೇವೆ ಸಲ್ಲಿಸುವ ಮೂಲಕ ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾದರು.
ಅಂದು ವಿಮಾನ ಯಾನದ ನಂತರ ಪೂಜಾ ಅವರ ಮಗಳು ಅಶ್ರಿತಾ ಟ್ವೀಟ್ ಮಾಡಿದ್ದು, ಅಮ್ಮ ನಿವೃತ್ತಿಯಾಗುವ ದಿನ ಆ ವಿಮಾನದಲ್ಲಿ ನಾನು ಪೈಲಟ್ ಆಗಿರಬೇಕು ಎಂಬುದು ಆಕೆಯ ಕನಸು ಆಗಿತ್ತು. ತುಂಬ ಸಂತೋಷವಾಗಿದೆ. ಇವತ್ತಿಗೆ ಆಕೆ ಏರ್ಹೋಸ್ಟೆಸ್ ಆಗಿ 38 ವರ್ಷ ಕಳೆಯುತ್ತದೆ. ಅವರ ಪರಂಪರೆಯನ್ನು ನಾನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದಿದ್ದಾರೆ.
ಪೂಜಾ ಮಂಗಳವಾರ ಮುಂಬೈ-ಬೆಂಗಳೂರು-ಮುಂಬೈ ವಿಮಾನದಲ್ಲಿ ಕೆಲಸ ಮಾಡುತ್ತಿದ್ದರು. ಆ ವಿಮಾನ ಲ್ಯಾಂಡ್ ಆಗುವ 10 ನಿಮಿಷಕ್ಕೂ ಮೊದಲು ಪೂಜಾ ನಿವೃತ್ತರಾಗುತ್ತಿರುವ ವಿಚಾರವನ್ನು ಮೈಕ್ನಲ್ಲಿ ತಿಳಿಸಲಾಯಿತು. ಪ್ರಯಾಣಿಕರೂ ಸಹ ಚಪ್ಪಾಳೆ ಹೊಡೆದು ಶುಭ ಹಾರೈಸಿದರು.
ಪೂಜಾ ಚಿಂಚಾಕರ್ ಅವರು ಏರ್ ಇಂಡಿಯಾದಲ್ಲಿ ವೃತ್ತಿ ಪ್ರಾರಂಭಿಸಿದ್ದು 1980ರಲ್ಲಿ. ಮುಂಬೈ ವಿಮಾನದಲ್ಲಿ 1981ರಿಂದಲೂ ಏರ್ಹೋಸ್ಟೆಸ್ ಆಗಿದ್ದರು. ಅವರ ಮಗಳು ಅಶ್ರಿತಾ 2016ರಲ್ಲಿ ಸೇವೆ ಪ್ರಾರಂಭ ಮಾಡಿದ್ದರು. ಅಶ್ರಿತಾ ಮಾಸ್ ಮೀಡಿಯಾ ವಿದ್ಯಾರ್ಥಿಯಾಗಿದ್ದರು. ಒಮ್ಮೆ ವಿಮಾನಯಾನದಲ್ಲಿ ಆಸಕ್ತಿ ಇದೆಯಾ ಎಂದು ಕೇಳಿದ್ದಕ್ಕೆ ಒಪ್ಪಿಕೊಂಡು ಈ ಕೆಲಸಕ್ಕೆ ಬಂದಿದ್ದಾಳೆ ಎಂದು ಪೂಜಾ ಹೇಳಿದ್ದಾರೆ.
ಅಲ್ಲದೆ ಅಶ್ರಿತಾಗೆ ಕೆನಡಾದ ಖಾಸಗಿ ವಿಮಾನ ಸಂಸ್ಥೆಯೊಂದರಲ್ಲಿ ಅವಕಾಶ ಸಿಕ್ಕಿದ್ದರೂ ಆಕೆ ಏರ್ ಇಂಡಿಯಾವನ್ನೇ ಆಯ್ಕೆ ಮಾಡಿಕೊಂಡಿದ್ದಳು ಎಂದಿದ್ದಾರೆ.
ನನ್ನ ನಿವೃತ್ತಿಯ ದಿನ ನೀನು ಪೈಲಟ್ ಆಗಿದ್ದ ವಿಮಾನದಲ್ಲೇ ನಾನೂ ಕೆಲಸ ಮಾಡಬೇಕು ಎಂದು ಒಮ್ಮೆ ಪೂಜಾ ಮಗಳ ಬಳಿ ಹೇಳಿಕೊಂಡಿದ್ದರು. ಅದರಂತೆ ಮಂಗಳವಾರ ಮುಂಬೈ-ಬೆಂಗಳೂರು-ಮುಂಬೈ ವಿಮಾನದಲ್ಲಿ ಆಶ್ರಿತಾ ಪೈಲಟ್ ಆಗಿದ್ದರು. ಪೂಜಾ ಏರ್ಹೋಸ್ಟೆಸ್ ಆಗಿ ತಮ್ಮ ಕೊನೇ ದಿನವನ್ನು ಮುಗಿಸುವ ಮೂಲಕ ಸ್ಮರಣೀಯವನ್ನಾಗಿಸಿಕೊಂಡರು.
Comments are closed.