ಕರ್ನಾಟಕ

ಹಳಸಲು ಕೇಕ್ ಮಾರಾಟ: ಗ್ರಾಹಕನಿಗೆ 10 ಸಾವಿರ ರೂ. ಪರಿಹಾರ

Pinterest LinkedIn Tumblr


ಬೆಂಗಳೂರು: ನಗರದಲ್ಲಿ ಎಕ್ಸ್‌ಪೈರಿ ಡೇಟ್‌( ಹಳಸಲಾದ ) ಕೇಕ್‌ಗಳನ್ನು ಮಾರಾಟ ಮಾಡಿದ ರಿಲಯನ್ಸ್ ಫ್ರೆಶ್‌ ಔಟ್‌ಲೆಟ್ ವಿರುದ್ಧ ಗ್ರಾಹಕ ನ್ಯಾಯಾಲಯ 10 ಸಾವಿರ ರೂ. ಪರಿಹಾರ ನೀಡುವಂತೆ ಗ್ರಾಹಕ ನ್ಯಾಯಾಲಯ ಆದೇಶಿಸಿದೆ. 90 ರೂ. ಮೌಲ್ಯದ ಕೇಕ್‌ ತಿಂದು ತನ್ನ ಪುತ್ರನಿಗೆ ಫುಡ್‌ ಪಾಯ್ಸನಿಂಗ್ ಆಗಿದೆ ಎಂದು ಬೆಂಗಳೂರಿನ ವ್ಯಕ್ತಿಯೊಬ್ಬರು ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು.

ಇಂದಿರಾನಗರ ಎರಡನೇ ಹಂತದಲ್ಲಿರುವ ರಿಲಯನ್ಸ್ ಫ್ರೆಶ್‌ ಸ್ಟೋರ್‌ಗೆ ಏಪ್ರಿಲ್ 18,2016ರಂದು ಹೋಗಿದ್ದಾಗ ಇತರೆ ವಸ್ತುಗಳೊಂದಿಗೆ ಮೂರು ಪ್ಯಾಕೆಟ್ ಕೇಕ್‌ಗಳನ್ನು ಕೊಂಡುಕೊಂಡಿದ್ದೆ. ಇದನ್ನು ತನ್ನ ಮಗ ತಿಂದ ಬಳಿಕ ಆತನಿಗೆ ಫುಡ್ ಪಾಯ್ಸನಿಂಗ್ ಆಯ್ತು. ತಕ್ಷಣ ಆತನನ್ನು ವೈದ್ಯರ ಬಳಿ ಕರೆದುಕೊಂಡು ಹೋಗಲಾಗಿದ್ದು, ಚಿಕಿತ್ಸೆಗೆ ಸಾವಿರಾರು ರೂ. ಖರ್ಚು ಮಾಡಬೇಕಾಯಿತು ಎಂದು ವ್ಯಕ್ತಿ ಆರೋಪಿಸಿದ್ದ.

ನಂತರ, ಕೇಕ್‌ ಪ್ಯಾಕೆಟ್‌ಗಳಲ್ಲಿ ಪ್ರಿಂಟ್ ಆಗಿದ್ದ ಡೇಟ್ ಚೆಕ್‌ ಮಾಡಿ ನೋಡಿದಾಗ ಮಾರ್ಚ್ 10,2016ರಂದು ಎಕ್ಸ್‌ಪೈರಿ ಆಗಿತ್ತು. ಆದರೂ ಇದನ್ನು ಮಾರಾಟ ಮಾಡಿದ್ದಾರೆ ಎಂದು ಜಯಚಂದ್ರನ್ ಆರೋಪಿಸಿದ್ದಾರೆ. ಬಳಿಕ ರಿಲಯನ್ಸ್ ಫ್ರೆಶ್‌ ಮ್ಯಾನೇಜರ್‌ಗೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆದರೆ, ಇದನ್ನು ಸುಮ್ಮನೆ ಬಿಡಬಾರದೆಂದು ನಿರ್ಧರಿಸಿದ ವ್ಯಕ್ತಿ, ಮೇ 12, 2016ರಂದು ಬೆಂಗಳೂರಿನ ಪ್ರಥಮ ಹೆಚ್ಚುವರಿ ಜಿಲ್ಲಾ ಗ್ರಾಹಕರ ವಿವಾದಗಳ ನಿವಾರಣಾ ವೇದಿಕೆಗೆ ರಿಲಯನ್ಸ್ ಮಳಿಗೆ ವಿರುದ್ಧ ದೂರು ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು, ಕೋರ್ಟ್‌ನಲ್ಲಿ ಎಕ್ಸ್‌ಪೈರಿ ಆದ ಕೇಕ್‌ ಪ್ಯಾಕೆಟ್‌ಗಳನ್ನು ದಾಖಲೆಯಾಗಿ ನೀಡಿದರೂ ರಿಲಯನ್ಸ್ ಪರ ವಕೀಲ ಇದು ಸುಳ್ಳು ಎಂದು ವಾದ ಮಾಡಿದ್ದರು. ದೂರುದಾರ ತನ್ನ ಅಂಗಡಿಯಲ್ಲಿ ಕೇಕ್‌ಗಳನ್ನು ತೆಗೆದುಕೊಂಡಿರುವುದು ನಿಜ ಎಂದು ರಿಲಯನ್ಸ್ ಒಪ್ಪಿಕೊಂಡರೂ, ಅವರು ನೀಡಿರುವ ದಾಖಲೆಗಳು ನಾವು ಮಾರಾಟ ಮಾಡಿರುವುದಲ್ಲ. ಅಲ್ಲದೆ, ಕೇಕ್‌ನಿಂದಲೇ ಫುಡ್‌ ಪಾಯ್ಸನಿಂಗ್ ಆಗಿದೆ ಎಂದು ದೂರುದಾರರು ವೈದ್ಯಕೀಯ ಪುರಾವೆಗಳನ್ನು ನೀಡಿಲ್ಲ ಎಂದು ರಿಲಯನ್ಸ್‌ ಪರ ವಕೀಲರು ವಾದ ಮಾಡಿದ್ದರು.

ಇನ್ನು, ಎರಡು ವರ್ಷಗಳ ಕಾಲ ಈ ಕೇಸ್ ನಡೆದಿದ್ದು, ಜಯಚಂದ್ರನ್ ಅವರು ತನ್ನ ಪುತ್ರನಿಗೆ ಫುಡ್ ಪಾಯ್ಸನ್ ಆಗಿದ್ದಕ್ಕೆ ಸೂಕ್ತವಾದ ವೈದ್ಯಕೀಯ ಪುರಾವೆಗಳನ್ನು ನೀಡಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯ ಪಟ್ಟಿದ್ದರು. ಆದರೆ, ಎಕ್ಸ್‌ಪೈರಿ ಡೇಟ್‌ ಆದ ಬಳಿಕವೂ ಆಹಾರ ವಸ್ತುಗಳನ್ನು ಮಾರಾಟ ಮಾಡಿದ್ದಕ್ಕೆ ರಿಲಯನ್ಸ್ ಮಳಿಗೆ ವಿರುದ್ಧ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಕೇಕ್‌ ಪ್ಯಾಕೆಟ್ ಎಕ್ಸ್‌ಪೈರಿ ಆಗಿದ್ದರೂ ಸಹ ಅದನ್ನು ಮಾರಾಟಕ್ಕೆ ಇಟ್ಟಿದ್ದು ನ್ಯಾಯಸಮ್ಮತವಲ್ಲ ಎಂದು ಕೋರ್ಟ್ ತಿಳಿಸಿದೆ.

ಈ ಹಿನ್ನೆಲೆ ದೂರುದಾರರ ಪರ ಜುಲೈ 10ರಂದು ತೀರ್ಪು ನೀಡಿದ ಗ್ರಾಹಕ ನ್ಯಾಯಾಲಯ, ಕೇಕ್‌ ಪ್ಯಾಕೆಟ್‌ಗಳ 90 ರೂ. ಯನ್ನು ವಾಪಸ್ ನೀಡಲು ರಿಲಯನ್ಸ್ ಮಳಿಗೆಯ ಮ್ಯಾನೇಜರ್‌ಗೆ ನಿರ್ದೇಶಿಸಿದ್ದಾರೆ. ಅಲ್ಲದೆ, ದೂರುದಾರನಿಗೆ ಅನಾನುಕೂಲತೆ ತಂದಿದ್ದಕ್ಕೆ 5 ಸಾವಿರ ರೂ. ಹಾಗೂ ಕೋರ್ಟ್‌ ವೆಚ್ಚಕ್ಕೆ 5 ಸಾವಿರ ರೂ. ನೀಡುವಂತೆ ಗ್ರಾಹಕರ ನ್ಯಾಯಾಲಯ ಸೂಚನೆ ನೀಡಿತ್ತು.

Comments are closed.