ರಾಷ್ಟ್ರೀಯ

ಬಾವಿ ತೋಡಿ ತಂದೆಗೆ ನೆರವಾದ ಪುತ್ರಿಯರು

Pinterest LinkedIn Tumblr


ಖಾರ್ಗೋನ್, ಮಧ್ಯ ಪ್ರದೇಶ: ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸರಕಾರದ ವ್ಯವಸ್ಥೆಯಲ್ಲಿನ ಲೋಪದಿಂದ ಸ್ಥಗಿತಗೊಂಡಿದ್ದ ಬಾವಿ ತೋಡುವ ಕೆಲಸವನ್ನು ಬಡತಂದೆಯ ಪುತ್ರಿಯರು ಮುಂದುವರಿಸಿ ಮಾದರಿಯಾದ ಪ್ರಕರಣ ಮಧ್ಯ ಪ್ರದೇಶದ ಖಾರ್ಗೋನ್‌ನ ಭೀಕಾಗಾಂವ್‌ನಲ್ಲಿ ನಡೆದಿದೆ.

ಬಾಬು ಬಾಸ್ಕರ್‌ ಹೆಸರಿನ ವ್ಯಕ್ತಿಗೆ ಸರಕಾರದಿಂದ ಆತನ ಜಮೀನಿನಲ್ಲಿ ಬಾವಿ ಮಂಜೂರಾಗಿತ್ತು. ಆದರೆ ನಂತರ 10 ಅಡಿ ಬಾವಿ ಕೊರೆಸಿದ ಸ್ಥಳೀಯಾಡಳಿತ ಆತನನ್ನು ಮರೆತೇಬಿಟ್ಟಿತ್ತು. ಬಾವಿ ಕೆಲಸ ಪೂರ್ತಿಗೊಳಿಸುವಂತೆ ಆತ ಮಾಡಿದ ಮನವಿಯೆಲ್ಲವೂ ವ್ಯರ್ಥವಾಯಿತು. ಜತೆಗೆ ಕಡುಬೇಸಿಗೆಯಲ್ಲಿ ನೀರಿನ ಸಮಸ್ಯೆಯೂ ಎದುರಾಯಿತು.

ಬೆಳೆಗೆ, ಕುಡಿಯಲೂ ನೀರಿಲ್ಲದಾದಾಗ ಭಾಸ್ಕರ್ ಪುತ್ರಿಯರಾದ ಜ್ಯೋತಿ ಮತ್ತು ಕವಿತಾ ಸ್ವತಃ ಮುಂದೆ ಬಂದು ತಂದೆಯ ಮನವೊಲಿಸಿ ಬಾವಿ ತೋಡುವ ಕೆಲಸ ಕೈಗೆತ್ತಿಕೊಂಡರು. ಬಾಸ್ಕರ್ ಬಾವಿ ತೋಡಿದರೆ, ಮಕ್ಕಳಿಬ್ಬರು ಅದರ ಹೂಳು ಮತ್ತು ಮಣ್ಣು ತೆಗೆದು ಹಾಕಿದರು.

ಇಬ್ಬರು ಕೂಡ ಪದವೀಧರರಾಗಿದ್ದು, ತಂದೆಯ ಕಷ್ಟ ನೋಡಲಾರದೆ ಸತತ ಕೆಲಸ ನಿರ್ವಹಿಸಿ ಬಾವಿ ತೋಡುವಲ್ಲಿ ಕೈಜೋಡಿಸಿದರು. ಬಾಸ್ಕರ್ ಸಹೋದರರಾದ ಲಖನ್ ಮತ್ತು ಚಂಪಾಲಾಲ್‌ ಮಧ್ಯೆ ಭೂಮಿ ಹಂಚಿಹೋಗಿದ್ದರಿಂದ ಬಾವಿ ತೋಡಲು ಸಮಸ್ಯೆಯಾಗುತ್ತದೆ ಎಂದು ಸ್ಥಳೀಯಾಡಳಿತ ಕೈಕೊಟ್ಟಿತ್ತು.

ಆದರೂ ಛಲ ಬಿಡದ ಪುತ್ರಿಯರು ತಾವೇ ಬಾವಿ ತೋಡುವಲ್ಲಿ ನೆರವಾಗಿದ್ದಾರೆ. ಇದರಿಂದಾಗಿ ಬಾವಿಯಲ್ಲಿ ನೀರಿನ ಒರತೆ ಕಾಣಿಸಿಕೊಂಡಿದೆ. ಮುಂದೆ ಮತ್ತಷ್ಟು ಆಳ ಬಾವಿ ತೋಡಿ, ಹೆಚ್ಚಿನ ನೀರು ಪಡೆಯುವ ವಿಶ್ವಾಸವನ್ನು ಜ್ಯೋತಿ ಮತ್ತು ಕವಿತಾ ಹೊಂದಿದ್ದಾರೆ.

Comments are closed.