ಕರಾವಳಿ

ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದನಕಳವು ಪ್ರಕರಣ : ಕುಖ್ಯಾತ ದನಕಳ್ಳ ಬೆಂಗ್ರೆ ಕಬೀರ್ ಬಂಧನ

Pinterest LinkedIn Tumblr

ಮಂಗಳೂರು,ಆಗಸ್ಟ್.03 : ಮಂಗಳೂರು ನಗರದ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಗೂಡ್ಸ್ ಶೆಡ್ ನಲ್ಲಿ ಮೇಯುತ್ತಿದ್ದ 2 ದನ ಹಾಗೂ ಕರುವನ್ನು ಕಳವು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ದನಕಳ್ಳತನದ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ದನ, ಕರು ಕಳವು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರೋಪಿಯನ್ನು ಕಸಬಾ ಬೆಂಗ್ರೆಯ ಅಹಮ್ಮದ್ ಕಬೀರ್ ಯಾನೆ ಬೆಂಗ್ರೆ ಕಬೀರ್ (30), ಎಂದು ಹೆಸರಿಸಲಾಗಿದೆ.

ಜುಲೈ 5ರಂದು ಮಂಗಳೂರು ನಗರದ ದಕ್ಷಿಣ ಪೊಲೀಸ್ ಠಾಣಾ ಗೂಡ್ಸ್ ಶೆಡ್ ಬಳಿಯಲ್ಲಿ ಮೇಯುತ್ತಿದ್ದ ದನಗಳ ಪೈಕಿ ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ 2 ದನ ಹಾಗೂ ಕರುವನ್ನು ಕಳ್ಳತನವಾಗಿದ್ದು, ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿ ಅಬ್ದುಲ್ ಕಬೀರ್ ಯಾನೆ ಪಾರಿವಾಳ ಕಬೀರ್ ಎಂಬಾತನನ್ನು ಈಗಾಗಲೇ ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ಆತನಿಂದ ಕಳ್ಳತನ ಮಾಡಿದ ದನ ಹಾಗೂ ಕರುವನ್ನು ಸಾಗಾಟ ಮಾಡಲು ಉಪಯೋಗಿಸಿದ ಬಿಳಿ ಬಣ್ಣದ ರಿಡ್ಜ್ ಕಾರನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.

ಇದೀಗ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎರಡನೇ ಆರೋಪಿ ಬೆಂಗ್ರೆ ಕಬೀರ್ ಎಂಬಾತನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

ಬಂಧಿತ ಬೆಂಗ್ರೆ ಕಬೀರ್ ಎಂಬಾತನ ವಿರುದ್ಧ ಈ ಹಿಂದೆ ಉಡುಪಿ ಜಿಲ್ಲೆಯ ಕಾರ್ಕಳ ನಗರ, ಕಾರ್ಕಳ ಗ್ರಾಮಾಂತರ ಠಾಣೆಗಳಲ್ಲಿ ಹಾಗೂ ಮಂಗಳೂರು ನಗರದ ಬಜ್ಪೆ, ಉಳ್ಳಾಲ, ಕೊಣಾಜೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣೆಗಳಲ್ಲಿ ದನಕಳ್ಳತನಕ್ಕೆ ಸಂಬಂಧಪಟ್ಟಂತೆ 13 ಪ್ರಕರಣಗಳು ಪಣಂಬೂರು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ಹೀಗೆ ಒಟ್ಟು 14 ಪ್ರಕರಣಗಳು ದಾಖಲಾಗಿರುತ್ತದೆ.

ಈತನು ಈ ಹಿಂದೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕೈರಂಗಳ ಪುಣ್ಯಕೋಟಿ ಗೋಶಾಲೆಯಿಂದ ದನ ಕಳ್ಳತನ ಮಾಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದನು. ಈತನು ಪ್ರಕರಣದ ವಿಚಾರಣೆ ಸಮಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಕೊಣಾಜೆ ಹಾಗೂ ಬಜ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ನ್ಯಾಯಾಲಯವು ಈತನ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯ ಪತ್ತೆ ಕಾರ್ಯದಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಶಾಂತಾರಾಮ, ಪಿಎಸ್ಐ ಯವರಾದ ಶ್ಯಾಮ್ ಸುಂದರ್ ಹೆಚ್ ಎಂ ಮತ್ತು ಹೆಚ್.ಡಿ ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Comments are closed.