ಅಂತರಾಷ್ಟ್ರೀಯ

ಮೋದಿ ಅಲೆ ತಡೆಗೆ ರಷ್ಯಾ ಸ್ಕೆಚ್‌?

Pinterest LinkedIn Tumblr


ವಾಷಿಂಗ್ಟನ್‌: ಸಾಮಾಜಿಕ ಜಾಲತಾಣಗಳ ಜಾದೂಗಾರಿಕೆ ಬಳಸಿ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಅವರನ್ನು ಗೆಲ್ಲಿಸಿದ್ದ ರಷ್ಯಾ ಹ್ಯಾಕರ್‌ ಪಡೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅಲೆ ತಡೆಗೆ ಸ್ಕೆಚ್‌ ಹಾಕಿದೆ ಎಂಬ ಮಾಹಿತಿ ಬಯಲಾಗಿದೆ.

ರಷ್ಯಾವು ಅಮೆರಿಕ ಚುನಾವಣೆ ಮೇಲೆ ಬೀರಿದ ಪ್ರಭಾವವನ್ನೇ ಮುಂದೆ ಭಾರತದತ್ತಲೂ ತಿರುಗಿಸುವ ಸನ್ನಾಹ ನಡೆಸಿದೆ ಎಂದು ಆಕ್ಸ್‌ಫರ್ಡ್‌ ಯೂನಿವರ್ಸಿಟಿಯ ಇಂಟರ್‌ನೆಟ್‌ ಅಧ್ಯಯನ ಸಂಸ್ಥೆಯ ಪ್ರೊಫೆಸರ್‌ ಫಿಲಿಪ್‌ ಎನ್‌.ಹೊವರ್ಡ್‌ ಎಚ್ಚರಿಸಿರುವುದು ಗಮನಾರ್ಹವಾಗಿದೆ.

ನರೇಂದ್ರ ಮೋದಿ ಅವರು ಜಾಗತಿಕ ನಾಯಕನಾಗಿ ಬೆಳೆಯುತ್ತಿರುವುದು, ಭಾರತ ಜಗತ್ತಿನ ಪ್ರಬಲ ರಾಷ್ಟ್ರವಾಗುವತ್ತ ಸಾಗುತ್ತಿರುವುದನ್ನು ತಡೆಯಲು ರಷ್ಯಾ ಈ ತಂತ್ರ ರೂಪಿಸಿದೆ ಎನ್ನಲಾಗಿದೆ. ಬಲಾಢ್ಯ ಅರ್ಥ ವ್ಯವಸ್ಥೆ, ದೊಡ್ಡ ಮಾರುಕಟ್ಟೆ ಹೊಂದಿರುವ ಭಾರತದ ಆಗುಹೋಗುಗಳನ್ನು ತಮಗೆ ಬೇಕಾದಂತೆ ನಿಯಂತ್ರಿಸಲು ರಷ್ಯಾ ಬಯಸಿದ್ದು, ಈ ನಿಟ್ಟಿನಲ್ಲಿ ಮೋದಿ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯುವ ಹುನ್ನಾರ ಹೊಂದಿದೆ ಎನ್ನಲಾಗುತ್ತಿದೆ.

ಫಿಲಿಪ್‌ ಹೋವರ್ಡ್‌ ಹೇಳಿದ್ದೆಲ್ಲಿ?

ಕಳೆದ ಚುನಾವಣೆಯಲ್ಲಿ ರಷ್ಯಾ ನಡೆಸಿದ ಅಂತರ್ಜಾಲ ಪಿತೂರಿಯಿಂದ ಬೆಚ್ಚಿ ಬಿದ್ದಿರುವ ಅಮೆರಿಕ, ಮುಂದಿನ ದಿನಗಳಲ್ಲಿ ಬಾಹ್ಯ ಶಕ್ತಿಗಳ ಪ್ರಭಾವಕ್ಕೆ ಒಳಗಾಗದಂತೆ ಎಚ್ಚರ ವಹಿಸಲು ನಿರ್ಧರಿಸಿ ರಚಿಸಿದ ಸೆನೆಟ್‌ ಸಮಿತಿ ಹಲವು ತಜ್ಞರ ಅನಿಸಿಕೆ, ಅಭಿಪ್ರಾಯಗಳನ್ನು ಆಲಿಸುತ್ತಿದೆ. ಈ ಸಮಿತಿಯ ಮುಂದೆ ಇಂಟರ್‌ನೆಟ್‌ ತಜ್ಞ ಫಿಲಿಪ್‌ ಹೋವರ್ಡ್‌ ಈ ವಿಷಯ ಬಹಿರಂಗಪಡಿಸಿದ್ದಾರೆ. ಬ್ರೆಜಿಲ್‌ ಚುನಾವಣೆಯಲ್ಲೂ ರಷ್ಯಾ ಮೂಗು ತೂರಿಸುವ ಎಚ್ಚರಿಕೆ ನೀಡಿದ್ದಾರೆ.

ಅಪರೇಷನ್‌ ಅಮೆರಿಕ ಹೀಗಿತ್ತು
ಬೇಹುಗಾರಿಕೆಗೆ ಹೆಸರಾದ ರಷ್ಯಾ, ಅಮೆರಿಕ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುವುದಕ್ಕಾಗಿಯೇ ಹಲವು ವರ್ಷಗಳಿಂದ ಸಿದ್ಧತೆ ನಡೆಸಿತ್ತು. ರಾಜಧಾನಿ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಅತ್ಯಾಧುನಿಕ ಕಂಪ್ಯೂಟರ್‌ ಬೇಹುಗಾರಿಕೆ ಕೇಂದ್ರ ಸ್ಥಾಪಿಸಿತ್ತು.
ಟ್ವಿಟರ್‌, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಂಥ ಜಾಲತಾಣಗಳನ್ನು ಬಳಸಿ ಗೆಲ್ಲುವ ಕುದುರೆ ಎಂದೇ ಹೇಳಲಾಗಿದ್ದ ಹಿಲರಿ ಕ್ಲಿಂಟನ್‌ ವಿರುದ್ಧ ಪ್ರಚಾರ ನಡೆಸಲಾಯಿತು.
ಕಳ್ಳದಾರಿಯಲ್ಲಿ ಸಾಮಾಜಿಕ ತಾಣಗಳ ಮಾಹಿತಿ ಸಂಗ್ರಹಿಸಿ ಟ್ರಂಪ್‌ ಪರ ಅಲೆ ಸೃಷ್ಟಿಸಲಾಯಿತು.
ಹಿಲರಿ ಅವರ ರಾಜಕೀಯ ಸಲಹೆಗಾರರ ಇ-ಮೇಲ್‌ ಸೇರಿದಂತೆ ಹಲವು ರಹಸ್ಯ ಜಾಲತಾಣಗಳಿಗೆ ಕನ್ನ ಹಾಕಲಾಯಿತು.
ಸೈಬರ್‌ ಸಮರಕ್ಕೆ ಖುದ್ದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಬೆಂಬಲ ನೀಡಿದ್ದಾರೆ ಎನ್ನಲಾಗಿದೆ.

ಪ್ರಯೋಗ ಯಶಸ್ವಿಯಾದೀತೇ?
ಅಮೆರಿಕದ ಸಾಮಾಜಿಕ ಮಾಧ್ಯಮ ಅತ್ಯಂತ ಶಿಸ್ತುಬದ್ಧವಾಗಿದ್ದರೂ ರಷ್ಯಾ ಅದನ್ನು ಒಡೆಯಲು ಶಕ್ತವಾಗಿತ್ತು. ಆದರೆ, ಭಾರತದ ಜಾಲತಾಣ ಅತ್ಯಂತ ವೃತ್ತಿಪರತೆ ಇಲ್ಲದೆ, ಅನಿಯಂತ್ರಿತವಾಗಿರುವಾಗ ದುರ್ಬಳಕೆ ಸಾಧ್ಯವಾಗಲೂಬಹುದು ಎನ್ನುತ್ತಾರೆ ತಜ್ಞರು.

ಮೋದಿ ಯಾಕೆ ಟಾರ್ಗೆಟ್‌?
ಮೋದಿ ಜಗತ್ತಿನ ದೊಡ್ಡ ನಾಯಕನಾಗಿ ಬೆಳೆಯುತ್ತಿರುವ ಬಗ್ಗೆ ಹೊಟ್ಟೆ ಉರಿ.
ಭಾರತ ಮತ್ತು ಅಮೆರಿಕ ಸಂಬಂಧ ವೃದ್ಧಿ, ಭಾರತವೂ ಜಗತ್ತಿನ ಅಗ್ರಗಣ್ಯ ರಾಷ್ಟ್ರವಾಗುವತ್ತ ಸಾಗುತ್ತಿರುವುದು.
ಮೇಕ್‌ ಇನ್‌ ಇಂಡಿಯಾಕ್ಕೆ ಪ್ರೋತ್ಸಾಹ ನೀಡುವುದರಿಂದ ರಷ್ಯಾದ ಮೇಲಿನ ಶಸ್ತ್ರಾಸ್ತ್ರ ಅವಲಂಬನೆ ಕುಸಿತ ಭಯ.
ಭಾರತದ ಮೇಲೆ ನಿಯಂತ್ರಣ ಸಾಧಿಸಲು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಸರಕಾರದ ಸ್ಥಾಪನೆ ಯತ್ನ.

ತ್ರಿವಳಿ ತಂತ್ರ
ಕೆಜಿಬಿ ನೆನಪು
ಈ ಹಿಂದೆ ಸೋವಿಯತ್‌ ಒಕ್ಕೂಟದ ಕಾಲದಲ್ಲಿ ಅಲ್ಲಿನ ಅಧಿಕೃತ ಸರಕಾರಿ ಗುಪ್ತಚರ ಇಲಾಖೆಯಾಗಿ ಕೆಜಿಬಿ ಭಾರತವೂ ಸಹಿತ ಜಗತ್ತಿನ ವಿವಿಧ ದೇಶಗಳ ವ್ಯವಹಾರದ ಮೇಲೆ ನಿಗಾ ಇರಿಸಿತ್ತು. ಭಾರತದಲ್ಲಿ ನೆಹರೂ ಆಡಳಿತ ಕಾಲಾವಧಿಯಿಂದ ಇಂದಿರಾ ಸರಕಾರದ ಆಳ್ವಿಕೆವರೆಗೆ ಭಾರತದ ರಾಜಕೀಯ ಮತ್ತು ಮಿಲಿಟರಿ ವಿದ್ಯಮಾನಗಳ ಮೇಲೆ ಕೆಜಿಬಿ ಗೌಪ್ಯ ನಿಗಾ ಇರಿಸಿತ್ತು ಎಂಬ ಮಾತಿದೆ.

ಕೇಂಬ್ರಿಜ್‌ ಅನಾಲಿಟಿಕಾ!
ಭಾರತದ ಸಾಮಾಜಿಕ ಜಾಲತಾಣಗಳ ಗೌಪ್ಯ ಮಾಹಿತಿಯನ್ನು ಹಂಚಿಕೆ ಮಾಡಿ ಕೆಲ ತಿಂಗಳ ಹಿಂದೆ ಕೇಂಬ್ರಿಜ್‌ ಅನಾಲಿಟಿಕಾ ಸಾಕಷ್ಟು ಸದ್ದು ಮಾಡಿತ್ತು. ಈ ಕೇಂಬ್ರಿಜ್‌ ಅನಾಲಿಟಿಕಾ ಸಂಸ್ಥೆ ರಷ್ಯಾದ ಕೆಜಿಬಿಯ ಅಪರಾವತಾರ ಎಂಬ ಮಾತಿದೆ. ಕೇಂಬ್ರಿಜ್‌ ಅನಾಲಿಟಿಕಾ ಕೂಡ ಕೇಂದ್ರದಲ್ಲಿ ಮೋದಿ ಸರಕಾರ ಮತ್ತೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವಲ್ಲಿ ಭಾರತದ ರಾಜಕಾರಣದಲ್ಲಿ ಮೋದಿ ವಿರೋಧಿಗಳಿಗೆ ನೆರವಾಗುತ್ತಿದೆ ಎಂಬ ಆರೋಪವಿದೆ.

ಅಮೆರಿಕದ ಸಿಐಎ
ಅಮೆರಿಕದ ಸರಕಾರಿ ಗುಪ್ತಚರ ಸಂಸ್ಥೆ ಸಿಐಎ ಕೂಡ ಪ್ರತಿಸ್ಫರ್ಧಿ ರಾಷ್ಟ್ರಗಳಲ್ಲಿ ಗೂಢಚರ್ಯೆ ನಡೆಸುವ ಅಪವಾದ ಹೊಂದಿದೆ. ಸಿಐಎ ಮಾದರಿಯಲ್ಲಿ ಕೆಜಿಬಿ ಕೂಡ ಈ ಹಿಂದೆ ಕೆಲಸ ಮಾಡುತ್ತಿತ್ತು. ಈಗ ರಷ್ಯಾದ ಹ್ಯಾಕರ್ಸ್‌ ಅಮೆರಿಕ ಮತ್ತು ಭಾರತದ ಸರಕಾರಗಳ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಸಾಹಸಕ್ಕೆ ಕೈ ಹಾಕಿವೆ ಎನ್ನಲಾಗುತ್ತಿದೆ.

Comments are closed.