ರಾಷ್ಟ್ರೀಯ

36 ವರ್ಷದ ನಂತರ ಭಾರತೀಯ ಭಾರತೀಯ ಪ್ರಜೆ ಪಾಕ್ ನಿಂದ ಬಂಧಮುಕ್ತ

Pinterest LinkedIn Tumblr


ಅಟ್ಟಾರಿ: 36 ವರ್ಷಗಳ ಕಾಲ ಪಾಕಿಸ್ತಾನದ ಜೈಲಿನಲ್ಲಿದ್ದ ಭಾರತೀಯನೊಬ್ಬನನ್ನು ಪಾಕ್ ಸರಕಾರ ಕೊನೆಗೂ ಬಂಧಮುಕ್ತಗೊಳಿಸಿದೆ. ಅಟ್ಟಾರಿ ಗಡಿಯ ಮೂಲಕ ಭಾರತೀಯ ವ್ಯಕ್ತಿಯನ್ನು ಬಿಡುಗಡೆಗೊಳಿಸಿ ಜೈಲಿನಿಂದ ತವರಿಗೆ ರವಾನಿಸಿದೆ.

ರಾಜಸ್ಥಾನದ ಜೈಪುರ ನಿವಾಸಿ ಗಜಾನಂದ್ ಶರ್ಮಾ 1982ರಲ್ಲಿ ಪ್ರಮಾದವಶಾತ್ ಪಾಕಿಸ್ತಾನ ಗಡಿಯನ್ನು ಪ್ರವೇಶಿಸಿದ್ದರು. ಹೀಗಾಗಿ, ಅವರನ್ನು ಪಾಕ್ ಸರಕಾರ ಬಂಧಿಸಿದ್ದು, ಕೇವಲ ಎರಡು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ಪಾಕಿಸ್ತಾನ ಕೋರ್ಟ್ ನೀಡಿದ್ದ ಶಿಕ್ಷೆ ಅವಧಿ ಅಂತ್ಯವಾದ ತಕ್ಷಣವೇ ಅವರನ್ನು ಭಾರತಕ್ಕೆ ಗಡೀಪಾರು ಮಾಡಬೇಕಿತ್ತು. ಆದರೆ, ಸಂಪೂರ್ಣ ಗಡೀಪಾರು ವಿಧಿವಿಧಾನಗಳನ್ನು ಅಂತ್ಯಗೊಳಿಸಲು 36 ವರ್ಷಗಳ ಕಾಲ ಹಿಡಿದಿದೆ.

68 ವರ್ಷದ ಗಜಾನಂದ್ ಸೋಮವಾರ ಪಾಕಿಸ್ತಾನದಿಂದ ವಾಪಸಾಗಿದ್ದು, ಅವರಿಗೆ ಸರಿಯಾಗಿ ಮಾತನಾಡಲೂ ಸಾಧ್ಯವಾಗುತ್ತಿಲ್ಲ. ಕುರ್ತಾ ಪೈಜಾಮಾ ಧರಿಸಿದ್ದ ಆತ, ನಡೆಯಲು ಸಹ ಬಿಎಸ್‌ಎಫ್‌ ಪಡೆಗಳ ಸಹಾಯ ಪಡೆದುಕೊಂಡಿದ್ದಾರೆ. ಇನ್ನು, ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸೌಹಾರ್ದಯುತ ಕ್ರಮಗಳಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನ ರೇಂಜರ್ಸ್‌ ಮಾಹಿತಿ ನೀಡಿದೆ. ಇತ್ತ ಅಟ್ಟಾರಿ ಗಡಿಯಲ್ಲಿ ಗಜಾನಂದ್‌ರನ್ನು ಸ್ವೀಕರಿಸಲು ಅವರ ಸಂಬಂಧಿಕರು ಯಾರೂ ಬಂದಿರಲಿಲ್ಲ. ಆದರೆ, ವಿಪ್ರ ಫೌಂಡೇಶನ್‌ನ ಸ್ವಯಂಸೇವಕರು ಗಡಿಯಲ್ಲಿ ಹಾಜರಿದ್ದು, ತವರಿಗೆ ಅವರನ್ನು ಕರೆದೊಯ್ಯಲು ಬಂದಿದ್ದರು.

ಇನ್ನು, ಗಜಾನಂದ್ ಪಾಕಿಸ್ತಾನ ಜೈಲಿನಲ್ಲಿರುವ ಬಗ್ಗೆ ಮೇ ತಿಂಗಳಲ್ಲಿ ಅವರ ಕುಟುಂಬಕ್ಕೆ ಮಾಹಿತಿ ಬಂದಿದೆ. ನಂತರ, ಜೈಪುರ ಸಂಸದ ರಾಮಚಂದ್ರನ್‌ ಬೋಹ್ರಾಗೆ ಈ ಬಗ್ಗೆ ತಿಳಿಸಿದ್ದಾರೆ. ಈ ಬಗ್ಗೆ ಬೋಹ್ರಾ ಕೇಂದ್ರ ವಿದೇಶಾಂಗ ಸಚಿವ ಜನರಲ್ ವಿ.ಕೆ.ಸಿಂಗ್‌ ಜತೆ ಚರ್ಚೆ ನಡೆಸಿದ ಬಳಿಕ, ಅವರು ಪಾಕಿಸ್ತಾನ ಜೈಲಿನಲ್ಲಿರುವುದು ಸ್ಪಷ್ಟವಾಗಿತ್ತು. ನಂತರ, ಪಾಕ್ ಸರಕಾರದೊಂದಿಗೆ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಹೊತ್ತಿಗೆ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ವಿಪ್ರ ಫಂಡೇಶನ್‌ನ ಪಂಜಾಬ್ ಅಧ್ಯಕ್ಷ ಮಾಹಿತಿ ನೀಡಿದ್ದಾರೆ.

ಅಟ್ಟಾರಿ ಅಂತಾರಾಷ್ಟ್ರೀಯ ಗಡಿಯಿಂದ ಭಾರತದ 29 ಮಂದಿಯನ್ನು ಪಾಕ್ ಬಿಡುಗಡೆಗೊಳಿಸಿದೆ. ಇನ್ನೊಂದೆಡೆ, ಭಾರತದ ಜೈಲಿನಲ್ಲಿದ್ದ ಅವಧಿ ಪೂರ್ಣಗೊಳಿಸಿದ ಪಾಕಿಸ್ತಾನದ 7 ಮಂದಿಯನ್ನು, ಗಡಿ ಮೂಲಕ ತವರಿಗೆ ಹಸ್ತಾಂತರಿಸಲಾಗಿದೆ. ಗಜಾನಂದ್‌ ಎಲ್ಲಿದ್ದಾರೆಂದು ತಿಳಿದುಕೊಳ್ಳಲು ಅವರ ಪತ್ನಿ ಹಾಗೂ ಪುತ್ರ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು. ಪಾಕಿಸ್ತಾನದಿಂದ ಬಿಡುಗಡೆಯಾದ ಭಾರತೀಯರನ್ನು ವಿಚಾರಿಸುತ್ತಿದ್ದರು. ಅಲ್ಲದೆ, ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಪಾಕಿಸ್ತಾನಕ್ಕೆ ಹೇಗೆ ಹೋದರು ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ವಿಪ್ರ ಫಂಡೇಶನ್‌ನ ಪಂಜಾಬ್ ಅಧ್ಯಕ್ಷ ಹೇಳಿದ್ದಾರೆ. ಜತೆಗೆ, ಗಜಾನಂದ್‌ರನ್ನು ವೈದ್ಯರ ಬಳಿ ಕರೆದೊಯ್ಯಲಲಾಗಿದ್ದು, ಅವರು ಚಿಕಿತ್ಸೆ ಪೂರ್ಣಗೊಳಿಸಿದ ಬಳಿಕ ಜೈಪುರಕ್ಕೆ ಕಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

Comments are closed.