ಕರಾವಳಿ

ತುಳುನಾಡಿನ ಗುತ್ತುಮನೆ ಶೈಲಿಯಲ್ಲಿ ನಿರ್ಮಾಣವಾದ ಮಂಗಳೂರಿನ ನೆಹರೂ ಮೈದಾನದ ಪ್ರವೇಶದ್ವಾರ ಲೋಕಾರ್ಪಣೆ

Pinterest LinkedIn Tumblr

ಮಂಗಳೂರು, ಆಗಸ್ಟ್.14: ಮಂಗಳೂರು ಮಹಾನಗರ ಪಾಲಿಕೆಯು ನಗರದ ನೆಹರೂ ಮೈದಾನದ ಪ್ರವೇಶದ್ವಾರವನ್ನು ತುಳುನಾಡಿನ ಗುತ್ತುಮನೆಯನ್ನು ಬಿಂಬಿಸುವ ಶೈಲಿಯಲ್ಲಿ ನಿರ್ಮಿಸಿದ್ದು, ಈ ಪ್ರವೇಶದ್ವಾರದ ಉದ್ಘಾಟನಾ ಸಮಾರಂಭ ಮಂಗಳವಾರ ನೆರವೇರಿತು.

ಆರ್ಕಿಟೆಕ್ಟ್ ಚಂದ್ರಕಿರಣ್ ನೇತೃತ್ವದಲ್ಲಿ ತುಳುನಾಡಿನ ಗುತ್ತುಮನೆಯನ್ನು ಬಿಂಬಿಸುವ ಶೈಲಿಯಲ್ಲಿ ಪ್ರವೇಶದ್ವಾರವನ್ನು ನಿರ್ಮಿಸಲಾಗಿದೆ. ದ್ವಾರವು ಸುಮಾರು 30 ಅಡಿ ಎತ್ತರ ಮತ್ತು 44 ಅಡಿ ಅಗಲವನ್ನು ಹೊಂದಿವೆ. ಗಣ್ಯ ವ್ಯಕ್ತಿಗಳಿಗೆ ವಿಶ್ರಾಂತಿ ಇತ್ಯಾದಿಗಾಗಿ ದ್ವಾರದ ಎರಡೂ ಕಡೆಗಳಲ್ಲಿ 2 ಕೋಣೆಗಳನ್ನು ನಿರ್ಮಿಸಲಾಗಿದೆ.

ಮನಪಾ ವತಿಯಿಂದ ಸುಮಾರು 21 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ಕೇಂದ್ರ ಮೈದಾನದ ಪ್ರವೇಶದ್ವಾರವನ್ನು ಇಂದು ಮಂಗಳೂರು ರು ಮೇಯರ್ ಭಾಸ್ಕರ್ ಕೆ. ಉದ್ಘಾಟಿಸಿದರು. ಈ ಸಂದರ್ಭ ಪ್ರವೇಶದ್ವಾರದ ಹೊರಭಾಗದಲ್ಲಿ ಗಿಡ ನೆಡುವ ಮೂಲಕ ‘ಹಸಿರು ಕರ್ನಾಟಕ’ ಯೋಜನೆಗೆ ಸಾಂಕೇತಿಕ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದಮೇಯರ್, ಮಂಗಳೂರೊನ ನೆಹರೂ ಮೈದಾನಕ್ಕೆ ಹಲವು ವರ್ಷಗಳ ಇತಿಹಾಸವಿದೆ. ದೇಶದ ಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರೂ ಇಲ್ಲಿ ಭಾಷಣ ಮಾಡಿರುವುದು ಮಂಗಳೂರಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ನೆಹರೂ ಮೈದಾನಕ್ಕೆ ಅತ್ಯುತ್ತಮ ವಿನ್ಯಾಸದ ಪ್ರವೇಶ ದ್ವಾರ ಕಲ್ಪಿಸುವ ಮೂಲಕ ಈ ಮೈದಾನದ ಸೌಂದರ್ಯ ಹೆಚ್ಚಿಸಲಾಗಿದೆ ಎಂದರಲ್ಲದೆ, ನೆಹರೂ ಮೈದಾನದ ಸುತ್ತಮುತ್ತಲಿನ ಪ್ರದೇಶವು ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಗೊಳ್ಳಲಿದೆ ಎಂದು ಹೇಳಿದರು.

ಮನಪಾ ಮುಖ್ಯ ಸಚೇತಕ, ಉಪ ಮೇಯರ್ ಮಹಮ್ಮದ್ ಕುಂಜತ್ತಬೈಲ್, ಮಾಜಿ ಮೇಯರ್ ಗಳಾದ ಎಂ. ಶಶಿಧರ್ ಹೆಗ್ಡೆ, ಕವಿತಾ ಸನಿಲ್, ಹರಿನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ಕಾರ್ಪೊರೇಟರ್ ದಿವಾಕರ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಕಾರ್ಯಪಾಲಕ ಅಭಿಯಂತರ ಲಿಂಗೇಗೌಡ, ಮನಪಾ ಅಧಿಕಾರಿ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು. ರೋಶನ್ ಲಸ್ರಾದೋ ನಿರೂಪಿಸಿದರು.

Comments are closed.