ನವದೆಹಲಿ: ಕಳೆದ 30 ವರ್ಷದಲ್ಲಿ ಸಾಧಿಸಲಾಗದ ಅಭಿವೃದ್ಧಿಯನ್ನು ನಾವು ಕೇವಲ 4 ವರ್ಷಗಳಲ್ಲಿ ಸಾಧಿಸಿದ್ದೇವೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಕಳೆದ ಯುಪಿಎ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕೇಸರಿ ರುಮಾಲು ಧರಿಸಿ ಕೆಂಪುಕೋಟೆಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಹಲವು ವಿಚಾರಗಳನ್ನು ದೇಶದ ಜನರೆದು ಪ್ರಸ್ತುತ ಪಡಿಸಿದರು. ತಮ್ಮ ಸರ್ಕಾರದ ಜಾರಿಗೆ ತಂದ ಕಾರ್ಯಕ್ರಮಗಳು, ಯೋಜನೆಗಳನ್ನು ತಮ್ಮ ಭಾಷಣದುದ್ದಕ್ಕೂ ಪ್ರಸ್ತಾಪಿಸಿದರು.
ದೇಶದ ಅಭಿವೃದ್ಧಿಯ ವಿಚಾರಗಳನ್ನೇ ಹೆಚ್ಚು ಪ್ರಸ್ತಾಪಿಸಿದ ಮೋದಿ ಅವರು, ಭಾರತ ಈಗ ಅಭಿವೃದ್ಧಿಯ ನೆಲ ಎಂದು ಬಣ್ಣಿಸಿದರು. ಇದೇ ವೇಳೆ ದೇಶದ 50 ಕೋಟಿ ಬಡ ವರ್ಗದ ಜನರಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸುವ ಯೋಜನೆಯನ್ನು ಕಾರ್ಯಕ್ರಮದಲ್ಲಿ ಪ್ರಕಟಿಸಿದರು. ಈ ಯೋಜನೆ ಸೆಪ್ಟೆಂಬರ್ 25ರಿಂದ ಜಾರಿಗೆ ಬರುವುದಾಗಿ ಪ್ರಧಾನಿ ತಿಳಿಸಿದರು.
‘ಭಾರತ ಇಂದು ಅಭಿವೃದ್ಧಿಯ ನೆಲವಾಗಿದೆ. ಆರ್ಥಿಕ ಅಭಿವೃದ್ಧಿಯಲ್ಲಿ ನಾವು ಹೊಸ ಮನ್ವಂಥರವನ್ನೇ ಸಾಧಿಸಿದ್ದೇವೆ. ಈ ಹಿಂದೆ ಅವಕಾಶಗಳೇ ಇರದ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಇಂದು ಭಾರತವೂ ಸೇರಿದೆ. ಈ ಮೂಲಕ ದೇಶ ಅಭಿವೃದ್ಧಿಯ ವೇಗದಲ್ಲಿದೆ. 2013ರ ಅವಧಿಯಲ್ಲಿ ಇದ್ದ ವೇಗದಲ್ಲೇ ನಾವು ದೇಶವನ್ನು ನಡೆಸಿಕೊಂಡು ಹೋಗಿದ್ದರೆ, ಅಂದು ಶೌಚಾಲಯಗಳು ನಿರ್ಮಾಣವಾಗುತ್ತಿದ್ದ ವೇಗದಲ್ಲೇ ನಾವು ಮುಂದೆ ನಡೆದಿದ್ದರೆ, ಅಂದು ವಿದ್ಯುಚ್ಛಕ್ತಿಯನ್ನು ವಿಸ್ತರಿಸುತ್ತಿದ್ದ ವೇಗಲ್ಲೇ ನಾವು ಹೆಜ್ಜೆ ಹಾಕಿದ್ದರೆ ಭಾರತವನ್ನು ಅಭಿವೃದ್ಧಿ ಮಾಡಲು ಇನ್ನೂ ದಶಕಗಳು ಬೇಕಾಗಿತ್ತು. ದೇಶದ ಲಕ್ಷಾಂತರ ಗ್ರಾಮಗಳು ಇಂದಿಗೂ ಕಗ್ಗತ್ತಲೇ ಇರುತ್ತಿದ್ದವು ಎನ್ನುವ ಮೂಲಕ ಮೋದಿ ಅವರು ಹಿಂದಿನ ಯುಪಿಎ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದರು. ಅಲ್ಲದೆ, ಎನ್ ಡಿಎ ಸರ್ಕಾರದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಿದೆ ಎಂದು ಪ್ರತಿಪಾದಿಸಿದರು.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ), ಸಮಾನ ಹುದ್ದೆ ಸಮಾನ ಪಿಂಚಣಿ (ಒಆರ್ಒಪಿ) ಹಲವು ವರ್ಷಗಳ ಕಾಲ ಜಾರಿಯಾಗಿರಲಿಲ್ಲ. ಆದರೆ ನಮ್ಮ ಸರ್ಕಾರ ಅವುಗಳನ್ನು ವಾಸ್ತವಕ್ಕೆ ತಂದಿದೆ ಎಂದು ತಮ್ಮ ಆಡಳಿತಾವಧಿಯಲ್ಲಿ ಜಾರಿಗೆ ತಂದ ಕಾರ್ಯಕ್ರಮಗಳನ್ನು ಉಲ್ಲೇಖಿಸುತ್ತಲೇ ಮೋದಿ ಮಾತನಾಡಿದರು. ದೇಶದ ರೈತರಿಂದ ಹಿಡಿದು ರಾಜಕಾರಣಿಗಳ ವರೆಗೆ ಎಲ್ಲರೂ ಬಹುದಿನಗಳಿಂದಲೂ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವಂತೆಒತ್ತಾಯಿಸಿದ್ದರು. ಆದರೆ ಏನೂ ಆಗಿರಲಿಲ್ಲ. ಆದರೆ, ನಮ್ಮ ಸರ್ಕಾರ ರೈತರ ಆಶೀರ್ವಾದದೊಂದಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಈಶಾನ್ಯ ಭಾರತ ಇಂದು ಶಾಂತವಾಗಿದೆ
ಇದೇ ವೇಳೆ ಈಶಾನ್ಯ ಭಾರತದಲ್ಲಿ ಇಂದು ಶಾಂತಿ ನೆಲೆಸಿದೆ ಎಂದು ಹೇಳುವ ಮೂಲಕ ನೇರವಾಗಿಯೇ ಅಲ್ಲಿನ ಬಿಜೆಪಿ ಸರ್ಕಾರಗಳ ವೈಖರಿಯನ್ನು ಶ್ಲಾಘಿಸಿದರು. 126 ಜಿಲ್ಲೆಗಳಲ್ಲಿದ್ದ ತೀವ್ರವಾದ ಇಂದು 90 ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಈ 90 ಜಿಲ್ಲೆಗಳಲ್ಲಿ ತೀವ್ರವಾದವನ್ನೂ ದೂರತಳ್ಳಲು ತಮ್ಮ ಸರ್ಕಾರ ಬದ್ಧವಾಗಿದೆ. ದೇಶಾದ್ಯಂತ ಶಾಂತಿ ಸ್ಥಾಪನೆ ನಮ್ಮ ಗುರಿ. ಅದರ ದಿಕ್ಕಿನಲ್ಲೇ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.
Comments are closed.