ಉಡುಪಿ: ಅಕ್ಷರ ದಾಸೋಹ ಕಾರ್ಯಕ್ರಮದಡಿ ಶಾಲೆಗಳಿಗೆ ಸರಬರಾಜು ಮಾಡುವ ಆಹಾರ ಸಾಮಗ್ರಿಗಳು ಹಾಳಾಗದಂತೆ ಎಚ್ಚರವಹಿಸಲು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಸೂಚಿಸಿದ್ದಾರೆ. ಅವರು ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಕ್ಷರ ದಾಸೋಹ ಯೋಜನೆಯಡಿ ಹಲವು ಶಾಲೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಸಾಮಾಗ್ರಿಗಳು ದಾಸ್ತಾನು ಆಗುತ್ತಿದ್ದು, ಈ ವಸ್ತುಗಳ ಸಕಾಲದಲ್ಲಿ ಬಳಕೆಯಾಗದ ಕಾರಣ ಹಾಳಾಗುತ್ತಿರುವುದರಿಂದ , ಎಲ್ಲಾ ಶಾಲೆಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಮಾತ್ರ ಸಾಮಗ್ರಿಗಳನ್ನು ಪಡೆಯುವಂತೆ ಸೂಚಿಸಿದ ದಿನಕರ ಬಾಬು, ಈ ಕುರಿತಂತೆ ಎಲ್ಲಾ ಶಾಲೆಗಳಿಗೆ ಸೂಚನೆ ನೀಡುವಂತೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.
ಕೆಲವು ಶಾಲೆಗಳಿಗೆ ಸರಬರಾಜು ಮಾಡಿರುವ ಹಾಲಿನ ಪುಡಿಯ ಪ್ಯಾಕೇಟ್ಗಳು ಒಡೆದು ಹೋಗಿದ್ದು, ಈ ಕುರಿತು ಸ್ಪಷ್ಟನೆ ನೀಡುವಂತೆ ಸದಸ್ಯೆ ಜ್ಯೋತಿ ಕೋರಿದ್ದು, ಇದಕ್ಕೆ ಉತ್ತರಿಸಿದ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶೇಷಶಯನ ಕಾರಿಂಜ, ಒಡೆದು ಹೋದ ಪ್ಯಾಕೆಟ್ ಗಳನ್ನು ಸ್ವೀಕರಿಸಿದಂತೆ ಎಲ್ಲಾ ಶಾಲೆಗಳಿಗೆ ಈಗಾಗಲೇ ಸೂಚಿಸಲಾಗಿದೆ, ಅಕ್ಷರ ದಾಸೋಹದ ಸಾಮಗ್ರಿಗಳ ಪ್ಯಾಕೇಟ್ ಗಳನ್ನು ಸ್ವೀಕರಿಸಿದ ನಂತರ ಅದರ ಜವಾಬ್ದಾರಿ ಶಾಲೆಯ ಮುಖ್ಯೋಪಧ್ಯಾಯರದಾಗಿದ್ದು, ಅವುಗಳನ್ನು ಹಾಳಾಗದಂತೆ ಸೂಕ್ತ ರೀತಿಯಲ್ಲಿ ಬಳಕೆ ಮಾಡಬೇಕು ಎಂದು ಹೇಳಿದರು.
ಪ್ರತಿಭಾ ಕಾರಂಜಿಯಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ವಲಯ ಮಟ್ಟಕ್ಕೆ ಗೈರು ಹಾಜರಾಗುತ್ತಿದ್ದು, ಈ ಕುರಿತಂತೆ ಬಿಇಓ ಗಳಿಂದ ಮಾಹಿತಿ ಪಡೆದು 2 ವಾರದಲ್ಲಿ ನೀಡುವಂತೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ದಿನಕರ ಬಾಬು ಸೂಚಿಸಿದರು. ವಿದ್ಯಾಸಿರಿ ಯೋಜನೆಯಡಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಗಿದಿದ್ದು, ತಾಂತ್ರಿಕ ಕಾರಣಗಳಿಂದ ಹಲವು ವಿದ್ಯಾರ್ಥಿಗಳು ಯೋಜನೆಯಿಂದ ವಂಚಿತರಾಗಿದ್ದು, ದಿನಾಂಕವನ್ನು ವಿಸ್ತರಣೆ ಮಾಡುವ ಕುರಿತಂತೆ ಸದಸ್ಯ ಶಿಲ್ಪಾ ಸುವರ್ಣ ಸಭೆಯ ಗಮನ ಸೆಳೆದರು. ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.
ಉಡುಪಿಯಲ್ಲಿ ಇತೀಚೆಗೆ ಸುರಿದ ಬೂದಿ ಮಿಶ್ರಿತ ಮಳೆ ಕುರಿತಂತೆ ಎನ್.ಯ.ಟಿ.ಕೆ ವರದಿ ನೀಡಿದ್ದು, ಈ ಮಳೆಯ ಕುರಿತಂತೆ ಪರಿಸರ ಇಲಾಖೆ ಕೈಗೊಂಡಿರುವ ಕ್ರಮದ ಕುರಿತ ವಿಧಾನ ಪರಿಷತ್ ಶಾಸಕ ಪ್ರತಾಪ ಚಂದ್ರ ಶೆಟ್ಟಿ ಪ್ರಶ್ನಿಸಿದರು, ಇದಕ್ಕೆ ಉತ್ತರಿಸಿದ ಪರಿಸರ ಅಧಿಕಾರಿ ಲಕ್ಷ್ಮಿಕಾಂತ್ , ಉಡುಪಿಯಲ್ಲಿ ಪ್ರಥಮ ಬಾರಿಗೆ ಇಂತಹ ಮಳೆ ಆಗಿದ್ದು, ಈ ಕುರಿತು ಎನ್.ಐ.ಟಿ.ಕೆ ತಜ್ಞರು ನೀಡಿರುವ ವರದಿಯಲ್ಲಿ ಬೂದಿ ಅಂಶ ಮಿಶ್ರಿತ ಎಂದು ನಮೂದಿಸಿದೆ ಆದರೆ ಹಾರು ಬೂದಿ ಎಂದು ನಮೂದಿಸಿಲ್ಲ, ಈ ವರದಿಯನ್ನು ಬೆಂಗಳೂರಿನ ಕೇಂದ್ರ ಪರಿಸರ ಮಂಡಳಿಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು. ಬೆಂಗಳೂರಿನಿಂದ ವರದಿ ಬಂದ ನಂತರ ಅದರ ಪ್ರತಿ ನೀಡುವಂತೆ ಶಾಸಕರು ಹೇಳಿದರು.
ಜಿಲ್ಲೆಯಲ್ಲಿ ಬಾಕಿ ಇರುವ ಪಡಿತರ ಚೀಟಿ ವಿತರಣೆ ಕುರಿತಂತೆ ಸದಸ್ಯ ಜನಾರ್ಧನ ತೋನ್ಸೆ ಪ್ರಶ್ನಿಸಿದರು, ಇದಕ್ಕೆ ಉತ್ತರಿಸಿದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿ ಎಸ್.ಆರ್.ಭಟ್, ಜಿಲ್ಲೆಯಲ್ಲಿ 7513 ಪಡಿತರ ಚೀಟಿ ವಿತರಣೆಗೆ ಬಾಕಿ ಇದ್ದು, ಸದ್ರಿ ಅರ್ಜಿದಾರರ ಸ್ಥಳ ಪರಿಶೀಲನೆ ನಡೆಸಿ ಕಾರ್ಡ್ಗಳನ್ನು ವಿತರಿಸಲಾಗುವುದು 2 ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ನೀಡಿದ ಸೂಚನೆಯಂತೆ, ಸಿಬ್ಬಂದಿ ಕೊರತೆಯಿದ್ದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಂಡು ಆದಷ್ಟು ಶೀಘ್ರದಲ್ಲಿ ಪಡಿತರ ಕಾರ್ಡ್ ವಿತರಿಸುವಂತೆ ತೋನ್ಸೆ ಹೇಳಿದರು.
ಪಾದೂರು ಐ.ಎಸ್.ಪಿ.ಆರ್.ಎಲ್ ಯೋಜನೆಯ ಕಾಮಗಾರಿ ವೇಳೆ ಬಂಡೆ ಸ್ಪೋಟದಿಂದ ಹಾನಿಯಾದ 150 ಮನೆಗಳಿಗೆ ಪರಿಹಾರ ನೀಡುವ ಕುರಿತಂತೆ ಈವರೆಗೂ ಯಾವುದೇ ಆದೇಶ ಪಾಲನೆಯಾಗದ ಕಾರಣ ಸದಸ್ಯೆ ಶಿಲ್ಪಾ ಸುವರ್ಣ ಪ್ರಶ್ನಿಸಿದರು, ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.
ಗಂಗೊಳ್ಳಿ ಬಂದರುಕಟ್ಟೆ ನಿರ್ಮಾಣಕ್ಕಾಗಿ ದುಂಡಿಕಲ್ಲನ್ನು ಪರವಾನಗಿ ಇಲ್ಲದೆ ಸಾಗಾಟ ಮಾಡುತ್ತಿದ್ದು , ಇದರಿಂದ ರಸ್ತೆಗಳು ಹಾಳಾಗುತ್ತಿದೆ ಮತ್ತು ಸರಕಾರದ ಬೊಕ್ಕಸಕ್ಕೆ ನಷ್ಠ ಉಂಟಾಗುತ್ತಿದೆ ಎಂದು ಸದಸ್ಯ ಬಾಬು ಶೆಟ್ಟಿ ಹಾಗೂ ಪ್ರತಾಪ್ ಹೆಗ್ಡೆ ಮಾರಾಳಿ ಮಾತನಾಡಿ 2016 ರಿಂದ ಇದುವೆರೆಗೆ ಎಷ್ಟು ಲೋಡು ಸಾಗಾಟ ಆಗಿರುವ ಕುರಿತು ಮಾಹಿತಿ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು, ಜಿಲ್ಲೆಯಲ್ಲಿ ಪರವಾನಗಿ ಪಡೆದಿರುವ ಕೋರೆಗಳಿಂದ ಕಲ್ಲು ಸಾಗಾಟವಾಗಿದ್ದು , ಈ ಕುರಿತ ವರದಿಯನ್ನು 20 ದಿನದಲ್ಲಿ ನೀಡಲಾಗುವುದು ಎಂದು ಉತ್ತರಿಸಿದರು.
ಶಿರೂರು ಗ್ರಾಮದ ಅಳವೆಗದ್ದೆಯಲ್ಲಿ ನಿರ್ಮಾಣವಾಗಿರುವ ಮೀನುಗಾರಿಕಾ ಜೆಟ್ಟಿಯ ಕುರಿತು ಸದಸ್ಯ ಬಟವಾಡೆ ಸುರೇಶ್ ಮಾತನಾಡಿ, ಕಾಮಗಾರಿಯ ಕುರಿತು ಆಕ್ಷೇಪ ವ್ಯಕ್ತಪಡಿಸಿದರು, ಈ ಕುರಿತಂತೆ ಲೋಕೋಪಯೋಗಿ ಇಲಾಖೆ ಮತ್ತು ಕೃಷಿ ಸ್ಥಾಯಿ ಸಮಿತಿಯಿಂದ ತನಿಖೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ 108 ಅಂಬುಲೈನ್ಸ್ ಸಮಸ್ಯೆ ಕುರಿತು ಸದಸ್ಯ ರೋಹಿತ್ ಕುಮಾರ್ ಶೆಟ್ಟಿ ಪ್ರಶ್ನಿಸಿದರು, ಈ ಕುರಿತಂತೆ ಜಿಲ್ಲೆಗೆ 8 ಹೊಸ 108 ಅಂಬುಲೈನ್ಸ್ಗಳು ಮಂಜೂರಾಗಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಕುರಿತು ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ , ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್ ಕೋಟ್ಯಾನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.
Comments are closed.