ಮಂಗಳೂರು, ಸೆಪ್ಟಂಬರ್.12: ಪೆಟ್ರೋಲ್,ಡಿಸೇಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ವಿರುದ್ಧ ಸೋಮವಾರ ಕಾಂಗ್ರೆಸ್ ಪಕ್ಷ ಕರೆ ನೀಡಿದ ಭಾರತ ಬಂದ್ ವೇಳೆ ನಗರದ ಶಿವಭಾಗ್‌ನ ಹೊಟೇಲ್‌ವೊಂದಕ್ಕೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಬಂಧಿಸಲಾಗಿದ್ದು, ಇನ್ನೊಬ್ಬನಿಗೆ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ಯುವ ಕಾಂಗ್ರೆಸ್ ಕಾರ್ಯಕರ್ತ ಕಾಟಿಪಳ್ಳ 3ನೇ ಬ್ಲಾಕ್ ನಿವಾಸಿ ಅಮರ್ ಸೋನ್ಸ್ (28) ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿಯ ಚಹರೆ ಪತ್ತೆಯಾಗಿದ್ದು, ಆತನಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಪೆಟ್ರೋಲ್,ಡಿಸೇಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ಕರೆ ನೀಡಿದ ಭಾರತ ಬಂದ್ ಸಂದರ್ಭ ಬೆಳಗ್ಗೆ ನಂತೂರು ಕಡೆಯಿಂದ ಬೆಂದೂರ್‌ವೆಲ್ ಕಡೆಗೆ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿದ ಇಬ್ಬರು ದುಷ್ಕರ್ಮಿಗಳು ಬಂದು ಅದರಲ್ಲಿ ಒಬ್ಬಾತ ಹೊಟೇಲ್ ಮುಂಭಾಗ ಬಂದು ಹೊಟೇಲ್ ಮೇಲೆ ಕಲ್ಲು ತೂರಾಟ ಮಾಡಿದ್ದಾನೆ. ಇದರಿಂದ ಹೊಟೇಲ್ ಸಿಬ್ಬಂದಿ ಜಯಂತ್ ಕಾಮತ್ (45)ರಿಗೆ ಗಾಯವಾಗಿತ್ತು.
ಈ ವೇಳೆ ಶಬ್ದ ಕೇಳಿ ಹೊರಗೆ ಓಡಿ ಬಂದ ಹೊಟೇಲ್ ಸಿಬ್ಬಂದಿ ದುಷ್ಕರ್ಮಿಯನ್ನು ಹಿಡಿಯಲು ಪ್ರಯತ್ನಿಸಿದಾಗ ಆತ ಬೈಕ್ ಮೂಲಕ ಪರಾರಿಯಾಗಿದ್ದಾನೆ. ಕಲ್ಲು ತೂರಾಟದ ವಿಡಿಯೋ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಈ ಕ್ಲಿಪ್ಪಿಂಗ್ ಪೊಲೀಸರಿಗೆ ಲಭಿಸಿತ್ತು. ಈ ಅಧಾರದ ಮೇಲೆ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೆ ಪ್ರಕರಣ ದಾಖಲಾಗಿತ್ತು.
Comments are closed.