ಕರ್ನಾಟಕ

18 ಕಾಂಗ್ರೆಸ್ ಶಾಸಕರು ರಾಜೀನಾಮೆ? ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ

Pinterest LinkedIn Tumblr


ಬೆಂಗಳೂರು: ರಾಜ್ಯ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ. ದೋಸ್ತಿ ಪಕ್ಷಗಳು ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಾಹಸ ಪಡುತ್ತಿದ್ದರೆ, ಸರ್ಕಾರ ಉರುಳಿಸಿ ತೀರಿಯೇ ಸಿದ್ಧ ಎಂದು ಬಿಜೆಪಿ ಟೊಂಕ ಕಟ್ಟಿ ನಿಂತಿದೆ.

ಹಲವು ಏಳು-ಬೀಳುಗಳ ನಡುವೆಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಅವರು ಸರ್ಕಾರ ರಚಿಸುವ ಆಸೆಯನ್ನು ಇನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಶನಿವಾರ ಕೂಡ ತಮ್ಮ ನಿವಾಸದಲ್ಲಿ ಬಿರುಸಿನ ಚಟುವಟಿಕೆ ನಡೆಸಿದ ಬಿಎಸ್​ವೈ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಶೋಭಾ ಕರಂದ್ಲಾಜೆ, ಸಿಸಿ ಪಾಟೀಲ್ ಹಾಗೂ ಶಾಸಕರು ಭಾಗಿಯಾಗಿದ್ದು, ಇನ್ನು ಎರಡು ಮೂರು ದಿನದಲ್ಲಿ ಕಾಂಗ್ರೆಸ್​ನಿಂದ ಕನಿಷ್ಠ 18 ಶಾಸಕರು ರಾಜೀನಾಮೆ ನೀಡಿ, ಬಿಜೆಪಿಗೆ ಬರಲು ತಯಾರಿದ್ದಾರೆ. ಕೇಂದ್ರ ನಾಯಕರೇ ನೇರವಾಗಿ ಕಾಂಗ್ರೆಸ್ ನ ಅತೃಪ್ತ ಶಾಸಕರ ಸಂಪರ್ಕದಲ್ಲಿದ್ದಾರೆ. ಮಾತುಕತೆ ಅಂತಿಮ‌ ಹಂತದಲ್ಲಿದೆ ಎಂದು ಬಿಜೆಪಿ ಶಾಸಕರಿಗೆ ಯಡಿಯೂರಪ್ಪ ಹೇಳಿದ್ದಾರೆ ಎನ್ನಲಾಗಿದೆ.

ಇನ್ನು ಎರಡು, ಮೂರು ದಿನದಲ್ಲಿ ರಾಜ್ಯ ರಾಜಕೀಯದಲ್ಲಿ ಯಾವ ಬದಲಾವಣೆ ಬೇಕಾದರೂ ನಡೆಯಬಹುದು. ಹೀಗಾಗಿ ಪಕ್ಷದ ಯಾವ ಶಾಸಕರು ಕ್ಷೇತ್ರ ಬಿಟ್ಟು ಎಲ್ಲೂ ಹೋಗದಂತೆ ಬಿಎಸ್​ವೈ ಸೂಚನೆ ನೀಡಿದ್ದಾರೆ.

ಯಾವುದೇ ಸಂದರ್ಭದಲ್ಲಿ ನಿಮಗೆ ದೂರವಾಣಿ ಕರೆ ಬರಬಹುದು. ತಕ್ಷಣ ಬೆಂಗಳೂರಿಗೆ ಬರಬೇಕಾಗುತ್ತದೆ. ಹೀಗಾಗಿ ಹೊರ ರಾಜ್ಯ ಅಥವಾ ದೇಶಗಳಿಗೆ ಹೋಗದಂತೆ ಶಾಸಕರಿಗೆ ಸೂಚನೆ ನೀಡಲಾಗಿದೆ. ಸೋಮವಾರದ ನಂತರ ಪ್ರತಿ ಕ್ಷಣವೂ ಬಹಳ ಮುಖ್ಯ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನೀವೆಲ್ಲ ಬದ್ಧರಾಗುತ್ತೀರೆಂಬ ನಂಬಿಕೆ ಇದೆ. ಮಹತ್ವದ ಬೆಳವಣಿಗೆ ಆಗುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮ ಸಹಕಾರ ಅತಿಮುಖ್ಯ ಎಂದು ಬಿಎಸ್ ವೈ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಆಪರೇಷನ್ ಬಿಜೆಪಿಯಿಂದ ತಳಮಳಕ್ಕೆ ಒಳಗಾಗಿರುವ ಜೆಡಿಎಸ್​ ಇಂದು ಹಾಸನದಲ್ಲಿ ಇದೇ ಮೊದಲ ಬಾರಿಗೆ ಪಕ್ಷದ ಶಾಸಕಾಂಗ ಸಭೆ ಕರೆದಿದೆ. ಸಭೆಯಲ್ಲಿ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬಿಜೆಪಿ ಜೊತೆಗೆ ಕೈಜೋಡಿಸದಂತೆ ತಿಳಿಹೇಳಲಿದೆ. ಇತ್ತ ಕಾಂಗ್ರೆಸ್​ನಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಯಾವ ಶಾಸಕರು ಬಿಜೆಪಿ ಜೊತೆಗೆ ಸಖ್ಯ ಸಾಧಿಸಿದ್ದಾರೆ ಎಂಬುದೇ ನಿಗೂಢವಾಗಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್​ ಶಾಸಕರು ಪಕ್ಷ ಬಿಟ್ಟು ಹೋಗದಂತೆ ತಡೆಯಲು ಇದೇ ತಿಂಗಳ 25ಕ್ಕೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶಾಸಕರ ಸಭೆ ಕರೆದಿದ್ದಾರೆ.

ಒಟ್ಟಿನಲ್ಲಿ ರಾಜ್ಯ ರಾಜಕೀಯ ವಿದ್ಯಮಾನಗಳು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಕ್ಷಿಪ್ರ ಬದಲಾವಣೆ ಸಾಧ್ಯವಾಗಬಹುದು.

Comments are closed.