ಕ್ರೀಡೆ

ಭಾರತ-ಪಾಕ್​ ಏಷ್ಯಾಕಪ್​ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆ ಹಾಡಿದ ಪಾಕಿಸ್ತಾನಿ ಯುವಕ ! ವೈರಲ್​ ಆದ ವೀಡಿಯೊ

Pinterest LinkedIn Tumblr

ಅಬುಧಾಬಿ: ಇತ್ತೀಚೆಗೆ ದುಬೈನಲ್ಲಿ ನಡೆದ ಏಷ್ಯಾಕಪ್​ ಕ್ರೀಡಾ ಕೂಟದ ಲೀಗ್​ ಹಂತದ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಪಾಕಿಸ್ತಾನದ ಯುವಕ ಆದಿಲ್​ ತಾಜ್​ ಎಂಬುವವರು ಭಾರತದ ರಾಷ್ಟ್ರಗೀತೆ ಹಾಡಿದ್ದರು. ಆ ವಿಡಿಯೋ ಈಗ ವೈರಲ್​ ಆಗಿದ್ದು, ಈ ಬಗ್ಗೆ ಆದಿಲ್​ ತಾಜ್​ ಮಾತನಾಡಿದ್ದಾರೆ.

ಶಾಂತಿಗಾಗಿ ನನ್ನ ಕಡೆಯಿಂದ ಸಣ್ಣದೊಂದು ಪ್ರಯತ್ನವಿದು ಎಂದು ಯುವಕ ಆದಿಲ್​ ತಾಜ್​ ಹೇಳಿಕೊಡಿದ್ದಾರೆ.

” ಭಾರತದ ರಾಷ್ಟ್ರಗೀತೆಯನ್ನು ನಾನು ಮೊದಲ ಬಾರಿಗೆ ಕೇಳಿದ್ದು, ಬಾಲಿವುಡ್​ ಚಿತ್ರ ‘ಕಬಿ ಖುಷಿ ಕಬಿ ಗಂ’ನಲ್ಲಿ. ಆಗ ನನಗೆ ರೋಮಾಂಚನವಾಗಿತ್ತು ,” ಎಂದೂ ಅವರು ಹೇಳಿದ್ದಾರೆ.

ಉಭಯ ದೇಶಗಳ ನಡುವಿನ ಶಾಂತಿಗಾಗಿ ಇದು ತಮ್ಮ ಸಣ್ಣ ಪ್ರಯತ್ನ ಎಂದು ಹೇಳಿಕೊಂಡಿರುವ ಆದಿಲ್​ ತಾಜ್​, ಇದಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಅವರ ಪ್ರೇರಣೆಯೂ ಇದೆ ಎಂದು ಹೇಳಿಕೊಂಡಿದ್ದಾರೆ. ” ಶಾಂತಿ ಸ್ಥಾಪನೆ ವಿಚಾರದಲ್ಲಿ ಭಾರತ ಒಂದು ಹೆಜ್ಜೆ ಮುಂದೆ ಬಂದರೆ ನಾವು ಎರಡು ಹೆಜ್ಜೆ ಮುಂದೆ ಹೋಗುತ್ತೇವೆ ಎಂದು ಇಮ್ರಾನ್​ ಖಾನ್​ ಪ್ರಧಾನಿಯಾಗಿ ಆಯ್ಕೆಯಾದ ದಿನ ಹೇಳಿದ್ದರು. ಕ್ರೀಡಾಂಗಣದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿದಾಗ ಇಮ್ರಾನ್​ ಖಾನ್​ ಮಾತು ನನಗೆ ನೆನಪಾಯಿತು. ಶಾಂತಿ ಸ್ಥಾಪನೆಗಾಗಿ ನಾನು ನನ್ನ ಸಣ್ಣದೊಂದು ಪ್ರಯತ್ನ ಮಾಡಿದೆ,” ಎಂದು ಅವರು ಹೇಳಿಕೊಂಡಿದ್ದಾರೆ.

ಕ್ರೀಡಾಂಗಣದಲ್ಲಿ ಪಾಕಿಸ್ತಾನದ ರಾಷ್ಟ್ರಗೀತೆ ಮೊಳಗಿದಾಗ ಭಾರತದ ಯುವಕರು ಗೌರವ ಸಮರ್ಪಿಸಿದ್ದನ್ನು ನಾನು ಗಮನಿಸಿದೆ ಎಂದು ಆದಿಲ್​ ತಿಳಿಸಿದ್ದಾರೆ.

ಏಷ್ಯಾಕಪ್​ 2018ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಬಹುದಾದ ಮುಂದಿನ ಪಂದ್ಯಕ್ಕೆ ಎರಡೂ ದೇಶಗಳ ರಾಷ್ಟ್ರ ಧ್ವಜಗಳನ್ನು ಕೊಂಡೊಯ್ಯುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.

” ಕ್ರೀಡೆ ದೇಶಗಳನ್ನು ಬೆಸೆಯುತ್ತವೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಮತ್ತಷ್ಟು ಸರಣಿಗಳು ನಡೆಯಬೇಕು,” ಎಂದೂ ಅವರು ಹೇಳಿಕೊಂಡಿದ್ದಾರೆ.

ದುಬೈನಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯದ ವೇಳೆ, ಕ್ರೀಡಾಂಗಣದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿದಾಗ ಪಾಕಿಸ್ತಾನದ ಯುವಕ ಆದಿಲ್​ ತಾಜ್​ ಅವರು ತಾವೂ ಕೂಡ ಅದಕ್ಕೆ ಧನಿಗೂಡಿಸಿದ್ದರು. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಭಾರಿ ಪ್ರಶಂಸೆ ವ್ಯಕ್ತವಾಗಿದೆ.

Comments are closed.