ರಾಷ್ಟ್ರೀಯ

ಆಂಧ್ರಪ್ರದೇಶದಲ್ಲಿ ಟಿಡಿಪಿ ಶಾಸಕ ಸೇರಿದಂತೆ ಇಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಮಹಿಳಾ ಮಾವೋವಾದಿಗಳು!

Pinterest LinkedIn Tumblr

ವಿಶಾಖಪಟ್ಟಣ: ಟಿಡಿಪಿ ಶಾಸಕ ಸರ್ವೇಶ್ವರ್ ರಾವ್ ಅವರೂ ಸೇರಿದಂತೆ ಒಟ್ಟು ಇಬ್ಬರು ಟಿಡಿಪಿ ನಾಯಕರನ್ನು ಮಹಿಳಾ ಮಾವೋವಾದಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ವಿಶಾಖಪಟ್ಟಣದ ಅರಕು ವ್ಯಾಲಿಯಲ್ಲಿ ಘಟನೆ ನಡೆದಿದ್ದು, ಶಾಸಕರೊಂದಿಗಿದ್ದ ಮತ್ತೋರ್ವ ಟಿಡಿಪಿ ನಾಯಕನೂ ಮಾವೋವಾದಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ. ಸರ್ವೇಶ್ವರ್ ರಾವ್ ಹಾಗೂ ಮತ್ತೋರ್ವ ಟಿಡಿಪಿ ನಾಯಕ, ಮಾಜಿ ಶಾಸಕನ ಸಿವೆರಿ ಸೋಮಾ ಅವರನ್ನೂ ಹತ್ಯೆ ಮಾಡಲಾಗಿದೆ. ಇಬ್ಬರೂ ನಾಯಕರು ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರು ನಾಯಕರನ್ನು ಮಾವೋವಾದಿಗಳು ಹತ್ಯೆ ಮಾಡಿದ್ದು, ಇದಕ್ಕೂ ಮುನ್ನ ಮಹಿಳಾ ಮಾವೋವಾದಿಗಳು-ಟಿಡಿಪಿ ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗುತ್ತಿದೆ. ಗಣಿಗಾರಿಕೆಯನ್ನು ತಕ್ಷಣವೇ ನಿಲ್ಲಿಸುವಂತೆ ಮಾವೋವಾದಿ ನಾಯಕರು ಸರ್ವೇಶ್ವರ್ ರಾವ್ ಅವರಿಗೆ ಎಚ್ಚರಿಸಿದರು. ಈ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಮಹಿಳಾ ಮಾವೋವಾದಿಗಳು ಶಾಸಕ, ಮಾಜಿ ಶಾಸಕನ ಮೇಲೆ ಗುಂಡು ಹಾರಿಸಿದ್ದು, ಆಂಧ್ರ-ಒಡಿಶಾ ಗಡಿ ಭಾಗದಲ್ಲಿದ್ದ ತಂಡ ಇದಾಗಿದೆ ಎಂದು ಹೇಳಲಾಗುತ್ತಿದೆ. ವೈಎಸ್ ಆರ್ ಕಾಂಗ್ರೆಸ್ ನಲ್ಲಿದ್ದ ಸರ್ವೇಶ್ವರ್ ರಾವ್ 2016 ರಲ್ಲಿ ಟಿಡಿಪಿಗೆ ಸೇರ್ಪಡೆಯಾಗಿದ್ದರು. ಹುಕುಂಪೇಟ್ ಮಂಡಲ್ ನಲ್ಲಿ ತಮ್ಮ ಸಂಬಂಧಿಕರ ಹೆಸರಿನಲ್ಲಿ ಗಣಿಗಾರಿಕೆ ಪರವಾನಗಿ ಪಡೆದಿದ್ದಕ್ಕಾಗಿ ಬುಡಕಟ್ಟು ಜನಾಂಗದವರು ಗಿರಿಜನ ಸಂಘಂ ಬ್ಯಾನರ್ ನಡಿ ಪ್ರತಿಭಟನೆ ನಡೆಸುತ್ತಿದ್ದರು.

Comments are closed.