ಬೆಂಗಳೂರು: ಕೆಟ್ಟ ಸಮಯ ಶುರುವಾದರೆ ಒಂದರ ಮೇಲೆ ಒಂದು ಏಟು ಎನ್ನುವ ಪರಿಸ್ಥಿತಿ ಸದ್ಯ ನಟ ದುನಿಯಾ ವಿಜಯ್ ಅವರದು. ಒಂದು ಕಡೆ ಟ್ರೈನರ್ ಮಾರುರಿ ಗೌಡನ ಮೇಲೆ ಹಲ್ಲೆ ಮಾಡಿ ಜೈಲು ಪಾಲಾಗುವ ಆತಂಕದಲ್ಲಿ ದುನಿಯಾ ವಿಜಿ ಇದ್ದರೆ, ಇನ್ನೊಂದು ಕಡೆ ಆಸ್ತಿಗಾಗಿ ಆತನ ಇಬ್ಬರು ಹೆಂಡತಿಯರು ಜಗಳ ಆರಂಭಿಸಿದ್ದಾರೆ.
ನಾಗರತ್ನ ಎಂಬಾಕೆಯನ್ನು ಮದುವೆಯಾಗಿ ಮೂರು ಮಕ್ಕಳನ್ನು ಹೊಂದಿರುವ ದುನಿಯಾ ವಿಜಯ್ ಚಿತ್ರರಂಗದಲ್ಲಿ ಯಶಸ್ಸು ಕಾಣುತ್ತಿದ್ದಂತೆ ಕುಟುಂಬದಲ್ಲಿ ಕಲಹ ಶುರುವಾಯಿತು. ಕಡೆಗೆ ಈ ಜಗಳ ಯಾವ ಮಟ್ಟಿಗೆ ಹೋಯಿತು ಎಂದರೆ ಹೆಂಡತಿಗೆ ಬೆದರಿಕೆ ಹಾಕುವ ಮಟ್ಟಕ್ಕೆ. ಈ ಕಲಹ ಪೊಲೀಸ್ ಠಾಣೆಗೆ ಹೋಗಿ ತಮಗೆ ತಮ್ಮ ಗಂಡನಿಂದಲೇ ಪ್ರಾಣ ಬೆದರಿಕೆ ಇದೆ. ಅಲ್ಲದೇ ತಮ್ಮ ಸಂಬಂಧಿ ಶಿವಶಂಕರ ಗೌಡ ಎಂಬುವನ ಮೇಲೆ ವಿಜಯ್ ಹಲ್ಲೆ ಮಾಡಿದ್ದಾರೆ ಎಂದು ನಾಗರತ್ನ 2013ರಲ್ಲಿ ಚನ್ನಮ್ಮ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇದಾದ ಬಳಿಕ ನಾಗರತ್ನ ವಿಜಯ್ ಜೀವನದಿಂದ ಹೊರ ಹೋದರು. ಈ ವೇಳೆ ದುನಿಯಾ ವಿಜಯ್ ಬಾಳಿಗೆ ನಟಿ ಕೀರ್ತಿ ಗೌಡ ಪ್ರವೇಶ ಮಾಡಿದರು. ಕಾನೂನಾತ್ಮಕವಾಗಿ ಮೊದಲ ಹೆಂಡತಿ ಬದುಕಿರುವಾಗಲೇ ದುನಿಯಾ ವಿಜಯ್ ಎರಡನೇ ಮದುವೆಯಾಗಿದ್ದಾರೆ. ವಿಜಯ್ ಕೂಡ ತನ್ನ ಎರಡನೇ ಹೆಂಡತಿ ಎಂದು ಆಕೆಯನ್ನು ಸಮಾಜದ ಮುಂದೆ ಒಪ್ಪಿಕೊಂಡರು.
ಇದರಿಂದಾಗಿ ಕೀರ್ತಿ ಕೂಡ ವಿಜಯ್ ತನ್ನನ್ನು ಹೆಂಡತಿ ಎಂದು ಸಮಾಜದಲ್ಲಿ ಒಪ್ಪಿಕೊಂಡಿದ್ದು, ತನಗೂ ಕೂಡ ಆಸ್ತಿಯಲ್ಲಿ ಪಾಲು ಬರಬೇಕು ಎಂದು ಮೊದಲ ಹೆಂಡತಿ ಬಳಿ ತಕರಾರು ತೆಗೆದಿದ್ದರು.
ಇನ್ನು ಇಂದು ದುನಿಯಾ ವಿಜಯ್ ಬಂಧನವಾಗುತ್ತಿದ್ದಂತೆ ತಮ್ಮ ಮಗನ ಬಗ್ಗೆ ವಿಚಾರಿಸಲು ನಾಗರತ್ನ ಕೀರ್ತಿ ಮನೆಗೆ ಹೋಗಿದ್ದಾರೆ. ಈ ವೇಳೆ ಆಸ್ತಿ ಕಲಹದ ಹಿನ್ನಲೆ ಇಬ್ಬರು ಬೌನ್ಸರ್ ಜೊತೆ ಸೇರಿ ಕೀರ್ತಿ ಗೌಡ ನಾಗರತ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ನಾಗರತ್ನ ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೀರ್ತಿ ವಿರುದ್ಧ ಎಫ್ ಐ ಆರ್ ದಾಖಲು ಮಾಡಿದ್ದಾರೆ.
ಇತ್ತ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ತನಗೆ ಜಾಮೀನು ಸಿಗುತ್ತದೆಯೋ ಇಲ್ಲವೋ, ಈ ಹಿಂದಿನ ಪ್ರಕರಣಗಳೆಲ್ಲಾ ದಾಖಲಿಸಿ ಪೊಲೀಸರು ರೌಡಿ ಶೀಟರ್ ಪಟ್ಟಿ ತೆರೆದರೆ ಎಂಬ ಆತಂಕದಲ್ಲಿದ್ದಾರೆ. ಅತ್ತ ಹೆಂಡತಿಯರಿಬ್ಬರು ಜಗಳವಾಡಿಕೊಂಡು ಪೊಲೀಸ್ ಮೆಟ್ಟಿಲೇರಿರುವುದು ಮತ್ತೊಂದು ಆತಂಕ ಸೃಷ್ಟಿಸಿದೆ.
Comments are closed.