ಕರ್ನಾಟಕ

ಭಾರೀ ಮಳೆ: ನೀರಲ್ಲಿ ಮುಳುಗಡೆಯಾಗಲಿರುವ ಬೆಂಗಳೂರಿನ ಈ ಪ್ರದೇಶಗಳು

Pinterest LinkedIn Tumblr


ಬೆಂಗಳೂರು: ನಿನ್ನೆ ರಾತ್ರಿಯಿಂದಲೂ ಬೆಂಗಳೂರಿನ ವಿವಿಧೆಡೆ ಭಾರೀ ಮಳೆಯಾಗುತ್ತಿದೆ. ಮುಂದಿನ 12 ಗಂಟೆ ಮಳೆ ಇನ್ನೂ ತೀವ್ರಗೊಳ್ಳಲಿದೆ. ನಗರದ ವಿವಿಧ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ನೀಡಿದೆ. ಬೆಂಗಳೂರಿನ ದಕ್ಷಿಣ, ಪಶ್ಚಿಮ ಮತ್ತು ಪೂರ್ವ ಭಾಗದ ಕೆಲ ಪ್ರದೇಶಗಳು ಜಲಾವೃತವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೆ. 25ರ ಬೆಳಗ್ಗೆಯಂದು ಜಲಕಂಟಕ ಎದುರಾಗುವ ಪ್ರದೇಶಗಳು ಇವು:

* ಲಗ್ಗೆರೆ, ಮೂಡಲಪಾಳ್ಯ, ಯಶವಂತಪುರ ರೈಲ್ವೆ ನಿಲ್ದಾಣದ ಪ್ರದೇಶ, ಆರ್.ಆರ್.ನಗರದ ಜೆಪಿ ಪಾರ್ಕ್ ಪ್ರದೇಶಗಳಿಗೆ ಹೆಚ್ಚು ಜಲ ಬಾಧೆಯಾಗಲಿದೆ.

* ಹೆಚ್​ಎಸ್​ಆರ್ ಲೇಔಟ್, ಮುನಿರೆಡ್ಡಿ ಲೇಔಟ್(ಬೊಮ್ಮನಹಳ್ಳಿ ಸಮೀಪ), ಬೆಂಗಳೂರು ದಕ್ಷಿಣ ಭಾಗದ ಮಾರುತಿನಗರ, ಬಿಸ್ಮಿಲ್ಲಾ ನಗರ, ಮಾಗಡಿ ಪೊಲೀಸ್ ಠಾಣೆ ಪ್ರದೇಶ, ಪೂರ್ವ ಭಾಗದ ರುದ್ರಪ್ಪ ಗಾರ್ಡನ್, ದೊಮ್ಮಲೂರು, ಕೆಳ ಪ್ರದೇಶಗಳಾದ ದಾಸರಹಳ್ಳಿ, ಶಿವಾನಂದ ನಗರ, ಎನ್ಆರ್ ಗಾರ್ಡನ್ ಮೊದಲಾದ ಸ್ಥಳಗಳಲ್ಲೂ ಪ್ರವಾಹ ಭೀತಿ ಇದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ತಿಳಿಸಿದೆ.

ಇದೇ ವೇಳೆ, ಇವತ್ತು ವರುಣನ ಆರ್ಭಟ ಮುಂದುವರಿದಿದೆ. ಮೆಜೆಸ್ಟಿಕ್, ಕಾರ್ಪೊರೇಷನ್ ಸರ್ಕಲ್, ಕೆಆರ್ ಮಾರ್ಕೆಟ್, ಶಾಂತಿನಗರ, ಬಿಟಿಎಂ ಲೇಔಟ್, ಹೆಚ್ಎಸ್ಆರ್ ಲೇಔಟ್, ಮಡಿವಾಳ ಸಿಲ್ಕ್ ಬೋರ್ಡ್, ಬನಶಂಕರಿ, ಕೋಣನಕುಂಟೆ ಕ್ರಾಸ್, ಕತ್ರಿಗುಪ್ಪೆ, ಜಯನಗರ ಮೊದಲಾದೆಡೆ ಭಾರೀ ಮಳೆಯಾಗಿದೆ. ಇಲ್ಲೆಲ್ಲಾ ರಸ್ತೆಗಳಲ್ಲಿ ಮಳೆ ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿ ವಿಪರೀತ ಟ್ರಾಫಿಕ್ ಜಾಮ್​ಗೆ ಕಾರಣವಾಗಿದೆ.

ಇದೇ ವೇಳೆ, ಮಳೆ ಹಿನ್ನೆಲೆಯಲ್ಲಿ ಬಿಬಿಎಂಪಿಯ 63 ಉಪವಿಭಾಗಗಳಲ್ಲಿ ಒಂದೊಂದು ಟೀಮ್ ಸಿದ್ದವಿರಲು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೂಚನೆ ನೀಡಿದ್ಧಾರೆ. ರಸ್ತೆ ಮತ್ತು ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಂತರೆ ತೆರವುಗೊಳಿಸಲು ಅಗತ್ಯ ಸಿಬ್ಬಂದಿ, ಉಪಕರಣದೊಂದಿಗೆ ಸನ್ನದ್ಧವಿರಲು ಅವರು ಆದೇಶಿಸಿದ್ದಾರೆ.

Comments are closed.