ಅಂತರಾಷ್ಟ್ರೀಯ

ಒಂದು ವರ್ಷದಲ್ಲಿ ಗಗನಕ್ಕೇರಲಿರುವ ಚಿನ್ನದ ದರ!

Pinterest LinkedIn Tumblr


ಸಿಂಗಾಪುರ: ಚೀನಾ ಜೊತೆಗಿನ ಆರ್ಥಿಕ ಜಂಗೀ ಕುಸ್ತಿ ಹಾಗೂ ತನ್ನ ಆರ್ಥಿಕತೆಯ ತೊಳಲಾಟದ ನಡುವೆ ಅಮೆರಿಕ ದೇಶದಲ್ಲಿ ಚಿನ್ನದ ದರ ಮುಂಬರುವ ದಿನಗಳಲ್ಲಿ ಯದ್ವಾತದ್ವಾ ಏರುವ ನಿರೀಕ್ಷೆ ಇದೆ. ಮುಂದಿನ ಒಂದು ವರ್ಷದಲ್ಲಿ ಅಮೆರಿಕದಲ್ಲಿ ಚಿನ್ನದ ದರವು ಕನಿಷ್ಠ ಶೇ. 10ರಷ್ಟಾದರೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಬ್ಯಾಂಕ್ ಆಫ್ ಅಮೆರಿಕಾ ಅಂದಾಜು ಮಾಡಿದೆ. ಸದ್ಯ ಅಮೆರಿಕದಲ್ಲಿ ಒಂದು ಔನ್ಸ್ ಚಿನ್ನಕ್ಕೆ 1,196 ಡಾಲರ್ ಇದೆ. ಇದು ಒಂದು ವರ್ಷದಲ್ಲಿ 1,350 ಡಾಲರ್​ಗೆ ಹೆಚ್ಚಾಗಲಿದೆಯಂತೆ. ಅಂದರೆ ಗ್ರಾಮ್ ಮತ್ತು ರೂಪಾಯಿಗೆ ಇದನ್ನು ಪರಿವರ್ತಿಸಿದರೆ 1 ಗ್ರಾಮ್ ಚಿನ್ನದ ದರವು 3,058 ರೂ.ನಿಂದ 3,458 ರೂ.ಗೆ ಹೆಚ್ಚಾಗಲಿದೆ. ಇದು ಅಮೆರಿಕ ದೇಶದೊಳಗಿನ ಚಿನ್ನದ ದರ.

ಯಾಕೆ ಕಾರಣ?
ಅಮೆರಿಕದ ಆರ್ಥಿಕತೆಯು ತುಸು ಸಮತೋಲನ ಕಳೆದುಕೊಳ್ಳುತ್ತಿದೆ. ಅಲ್ಲಿಯ ವಿತ್ತೀಯ ಕೊರತೆಯು ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ. ಸರಕಾರದಲ್ಲಿ ಹೊಸ ವಿತ್ತೀಯ ನೀತಿಯಲ್ಲಿ ಬಡ್ಡಿ ದರ ಕಡಿಮೆ ಮಾಡಲಾಗಿದೆ. ತೆರಿಗೆಯನ್ನೂ ಕಡಿಮೆ ಮಾಡಲಾಗಿದೆ. ಇದರಿಂದ ಅಮೆರಿಕ ಸರಕಾರಕ್ಕೆ ಬರುವ ಆದಾಯ ಕಡಿಮೆಯಾಗಲಿದೆ. ಇದರ ಪರಿಣಾಮವಾಗಿ 2020ರಲ್ಲಿ ಅಲ್ಲಿ 1 ಲಕ್ಷ ಕೋಟಿ ಡಾಲರ್​ನಷ್ಟು ವಿತ್ತೀಯ ಕೊರತೆ ಎದುರಾಗುವ ಅಪಾಯವಿದೆ ಎನ್ನಲಾಗಿದೆ. ಚಿನ್ನದ ಮೇಲೆ ಅಲ್ಲಿ ತಾತ್ಕಾಲಿಕವಾಗಿ ಬೇಡಿಕೆ ಹೆಚ್ಚಿ, ದರ ಹೆಚ್ಚಾಗುವ ನಿರೀಕ್ಷೆ ಇದೆ.

ಚೀನಾ ದೇಶದೊಂದಿಗೆ ಅಮೆರಿಕ ನಡೆಸುತ್ತಿರುವ ವ್ಯಾವಹಾರಿಕ ಯುದ್ಧವೂ ತನ್ನ ಪರಿಣಾಮ ತೋರಲಿದೆ. ಅಮೆರಿಕದ ಮಾರುಕಟ್ಟೆಗೆ ಬರುವ 26 ಸಾವಿರ ಕೋಟಿ ಡಾಲರ್​ನಷ್ಟು ಮೌಲ್ಯದ ಮೇಡ್ ಇನ್ ಚೀನಾ ಉತ್ಪನ್ನಗಳ ಮೇಲೆ ಇನ್ನಷ್ಟು ಸುಂಕ ವಿಧಿಸಲು ಅಮೆರಿಕ ಸರಕಾರ ನಿರ್ಧರಿಸಿದೆ. ಇದು ಅಮೆರಿಕದ ಆರ್ಥಿಕ ಆರೋಗ್ಯಕ್ಕೆ ಮಾರಕ ಎಂದು ಅಲ್ಲಿನ ತಜ್ಞರು ಎಚ್ಚರಿಸಿದ್ದಾರೆ.

ಭಾರತದ ಮೇಲೆ ಏನು ಪರಿಣಾಮ?
ಅಮೆರಿಕದಲ್ಲಿ ಚಿನ್ನದ ಬೆಲೆ ಹೆಚ್ಚಾದಲ್ಲಿ ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ನು, ಅಮೆರಿಕದ ವಿತ್ತೀಯ ಕೊರತೆ ನೀಗಿಸಲು ಅಲ್ಲಿನ ಸರಕಾರವು ಹೆಚ್ಚುವರಿ ನೋಟುಗಳನ್ನು ಮುದ್ರಿಸುವ ನಿರೀಕ್ಷೆ ಇದೆ. ಹೀಗಾದಲ್ಲಿ ಡಾಲರ್ ಮೌಲ್ಯ ತುಸು ಕುಸಿಯಬಹುದು. ರೂಪಾಯಿ ಮೌಲ್ಯ ಚೇತರಿಸಿಕೊಳ್ಳಬಹುದು. ಆ ಮೂಲಕ ಚಿನ್ನದ ದರ ಕಡಿಮೆಗೊಂಡರೂ ಅಚ್ಚರಿ ಇಲ್ಲ.

ಭಾರತದಲ್ಲಿ ಸದ್ಯ ಚಿನ್ನದ ದರವು 1 ಗ್ರಾಮ್​ಗೆ 3,174 ರೂಪಾಯಿ ಇದೆ. ಅದೇ ಅಮೆರಿಕದಲ್ಲಿ ಒಂದು ಗ್ರಾಮ್​ಗೆ 3,058 ರೂಪಾಯಿ ಇದೆ.

Comments are closed.