ರಾಷ್ಟ್ರೀಯ

ಕೇರಳ ಸರಕಾರದಿಂದ ಮಂಗಳಮುಖಿಯರಿಗೆ ವಿಶೇಷ ಸವಲತ್ತು

Pinterest LinkedIn Tumblr

ಮಲಪ್ಪುರಂ: ಕೇರಳದಲ್ಲಿ ಮಂಗಳಮುಖಿಯರಿಗೆ ಸರಕಾರ ವಿಶೇಷ ಸವಲತ್ತು ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಎಲ್ಲ ಪ್ರಯತ್ನ ಮಾಡುತ್ತಿದೆ. ಪ್ರತಿ ಕಾಲೇಜಿನಲ್ಲಿ ಒಂದು ಸೀಟ್ ಅನ್ನು ಮಂಗಳಮುಖಿಯರಿಗೆಂದೇ ಮೀಸಲು ಇರಿಸಲಾಗುತ್ತದೆ. ಜತೆಗೆ ಅವರು ಕಾಲೇಜು ಸೇರಿ ಶಿಕ್ಷಣ ಪಡೆಯಲು ಪ್ರೇರೇಪಿಸಲಾಗುತ್ತದೆ.

ಆದರೆ ಕಾಲೇಜಿನಲ್ಲಿ ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕ ಶೌಚಗೃಹವಿದ್ದರೂ, ಅವುಗಳನ್ನು ಬಳಸಲು ಮಂಗಳಮುಖಿ ವಿದ್ಯಾರ್ಥಿನಿ ಮುಜುಗರಪಟ್ಟುಕೊಳ್ಳುತ್ತಿದ್ದರು. ಅವರ ಮನವಿಯ ಮೇರೆಗೆ ಮಲಪ್ಪುರಂನ ಸರಕಾರಿ ಕಾಲೇಜಿನಲ್ಲಿ ಮಂಗಳಮುಖಿಯರಿಗೆ ಬಳಸಲು ಅನುಕೂಲವಾಗುವಂತಹ ವಿಶೇಷ ಶೌಚಗೃಹವನ್ನು ಒದಗಿಸಲಾಗಿದೆ.

ಈ ವಿಚಾರ ಸಾಮಾಜಿಕ ಮಾಧ್ಯಮದಲ್ಲೂ ಸದ್ದು ಮಾಡಿದ್ದು, ಕಾಲೇಜಿನ ಕ್ರಮವನ್ನು ಜನರು ಶ್ಲಾಘಿಸಿದ್ದಾರೆ. ಮಂಗಳಮುಖಿಯರಿಗೆ ವಿಶೇಷ ಆದ್ಯತೆ ನೀಡುತ್ತಿರುವ ಕಾಲೇಜು ಮತ್ತು ಸರಕಾರದ ಕ್ರಮದಿಂದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜಿಗೆ ಸೇರಲು ಪ್ರೇರಣೆಯುಂಟಾಗಿದೆ.

ಸರಕಾರದ ಸಾಮಾಜಿಕ ನ್ಯಾಯ ಸಮಿತಿ ಮಂಗಳಮುಖಿಯರ ಮನವಿಗೆ ಸ್ಪಂದಿಸಿದ್ದು, ಅಗತ್ಯವಿದ್ದಲ್ಲಿ ಬೇಕಾದ ಸೌಲಭ್ಯ ಕಲ್ಪಿಸುವುದಾಗಿ ಹೇಳಿದೆ. ಮಲಪ್ಪುರಂನ ಸರಕಾರಿ ಕಾಲೇಜಿಗೆ ದಾಖಲಾಗಿದ್ದ ರಿಯಾ ಇಶಾ ಎಂಬ ಮಂಗಳಮುಖಿ ತನಗೆ ಕಾಲೇಜಿನಲ್ಲಿ ಶೌಚಗೃಹದ ಸಮಸ್ಯೆಯಾಗುತ್ತಿರುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರು. ತಕ್ಷಣವೇ ಇಲಾಖೆ ಅವರಿಗೆ ಅನುಕೂಲವಾಗುವಂತೆ ವಿಶೇಷ ಶೌಚಗೃಹ ವ್ಯವಸ್ಥೆ ಕಲ್ಪಿಸಿದೆ.

ಮೂಲ ವರದಿ: ಸಮಯಂ ಮಲಯಾಳಂ

Comments are closed.