ಕರಾವಳಿ

ಮಂಗಳೂರಿನಲ್ಲಿ ನಿಷೇದಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮೂವರ ಸೆರೆ : 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಸೊತ್ತು ವಶ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.26: ಸಾರ್ವಜನಿಕ ಸ್ಥಳದಲ್ಲಿ ನಿಷೇದಿತ ಗಾಂಜಾ ಹಾಗೂ ಎಂ.ಡಿ.ಎಂ.ಎ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಮೂವರನ್ನು ಸಿಸಿಬಿ ಹಾಗೂ ಉರ್ವ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಗುರುಪುರ ಕೈಕಂಬ ನಿವಾಸಿ ಮುಹಮ್ಮದ್ ಶಾಕೀರ್ (23), ಪಂಜಿಮೊಗರು ಮೋಯ್ದೀನ್ ಜುಮ್ಮಾ ಮಸೀದಿ ಬಳಿಯ ನಿವಾಸಿ ನದೀಮ್ (26) ಹಾಗೂ ಕಾವೂರು ಶಾಂತಿ ನಗರದ ಅಲ್ ಫಾರೂಕ್ ಮಸೀದಿ ಬಳಿಯ ನಿವಾಸಿ ಫಕ್ರುದ್ದೀನ್ ಯಾನೆ ಇರ್ಫಾನ್ (26) ಬಂಧಿತ ಆರೋಪಿಗಳು.

ಆರೋಪಿಗಳು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟಿಕಾನ ಬಳಿಯ ಸನ್ ರಾಯಲ್ ರೆಸಿಡೆನ್ಸಿ ಎದುರಿನ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಗಾಂಜಾ ಹಾಗೂ ಎಂಡಿಎಂಎ ಎಂಬ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಸಂದರ್ಭ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಹಾಗೂ ಉರ್ವ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಏಳು ಗ್ರಾಂ ಗಾಂಜಾ, 20 ಗ್ರಾಂ ತೂಕದ ಎಂಡಿಎಂಎ ಎಂಬ ಮಾದಕ ವಸ್ತು, ಮೂರು ಮೊಬೈಲ್ ಫೋನ್‌ಗಳು ಮತ್ತು 74,025 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 2,20,275 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಅಪರಾಧ ಸಂಚಾರ ವಿಭಾಗದ ಪೊಲೀಸ್ ಉಪ ಆಯುಕ್ತೆ ಉಮಾ ಪ್ರಶಾಂತ್ ಹಾಗೂ ಕೇಂದ್ರ ಉಪವಿಭಾಗದ ಎಸಿಪಿ ಉದಯ ನಾಯಕ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಮತ್ತು ಉರ್ವ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Comments are closed.