ಕರ್ನಾಟಕ

ಪ್ರಜ್ಞೆ ತಪ್ಪಿಸಿ ಮಹಿಳೆಗೆ ಎರಡನೇ ಮದುವೆ!

Pinterest LinkedIn Tumblr


ಚಿತ್ರದುರ್ಗ: ಆ ಪ್ರೇಮಿಗಳ ಪಾಲಿಗೆ ತಂದೆಯೇ ವಿಲನ್ ಆಗಿದ್ದಾರೆ. ಯುವ ಜೋಡಿ ಪ್ರೇಮ ವಿವಾಹವಾಗಿದ್ದರೂ ಪೋಷಕರು ಯುವತಿಗೆ ವಾಮಾಚಾರ ಮಾಡುವ ಮೂಲಕ ಪ್ರಜ್ಞೆ ತಪ್ಪಿಸಿ ಸೋದರ ಮಾವನ ಜತೆ ಮರು ಮದುವೆ ಮಾಡಿಸಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ.

ಬಳ್ಳಾರಿ ತಾಲ್ಲೂಕಿನ ಹಿರೇಕುಂಬಳಗುಂಟೆ ಗ್ರಾಮದ ಮಾನಸಾ ಹಾಗೂ ಬಳ್ಳಾರಿ ನಗರದ ವಿಜಯಕುಮಾರ್ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಪ್ರೇಮವಿವಾಹಕ್ಕೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸುವ ಭಯದಿಂದಲೇ ಕಳೆದ ಎರಡು ತಿಂಗಳ ಹಿಂದಷ್ಟೇ ಚಿತ್ರದುರ್ಗದಲ್ಲಿ ರಜಿಸ್ಟರ್ ಮ್ಯಾರೇಜ್ ಆಗಿದ್ದಾರೆ.

ಗೊತ್ತಿದ್ದರೂ ಎರಡನೇ ಮದುವೆ ಮಾಡಿಸಿದ ತಂದೆ

ಆದರೆ ಪ್ರೇಮ ವಿವಾಹ ಆಗಿರುವ ಬಗ್ಗೆ ತಿಳಿದ ಮಾನಸಾಳ ತಂದೆ ಬಸವರಾಜಪ್ಪ-ಮಂಗಳಮ್ಮ ಮತ್ತು ಸಂಬಂಧಿಗಳು ಸೇರಿ ಬರೆ ಹಾಕಿ ಹಿಂಸಿಸಿದ್ದಾರಂತೆ. ಅಲ್ಲದೆ ಮಾನಸಾಗೆ ವಾಮಾಚಾರ ಮಾಡಿಸಿದ್ದಾರಂತೆ. ಅಷ್ಟೇ ಅಲ್ಲದೆ ಪ್ರಜ್ಞೆ ತಪ್ಪಿಸಿ ಧರ್ಮಸ್ಥಳಕ್ಕೆ ಕರೆದೊಯ್ದು ಸೋದರ ಮಾವನಾದ ರಾಘವೇಂದ್ರನ ಜೊತೆ ಮರು ಮದುವೆ ಮಾಡಿಸಿದ್ದಾರಂತೆ. ಬಳಿಕ ಎಚ್ಚೆತ್ತ ಮಾನಸ ಅಲ್ಲಿಂದ ತಪ್ಪಿಸಿಕೊಂಡು ಮಂಗಳೂರಿಗೆ ತೆರಳಿ ಫೋನ್ ಮೂಲಕ ಸಂಪರ್ಕಿಸಿ ಚಿತ್ರದುರ್ಗಕ್ಕೆ ಬಂದು ವಿಜಯ ಜತೆ ಸೇರಿದ್ದಾಳೆ. ಆದ್ರೆ, ಪೋಷಕರಿಂದ ಜೀವ ಭಯವಿದೆ . ಹೀಗಾಗಿ, ರಕ್ಷಣೆ ಕೊಡಿ ಎಂದು ಚಿತ್ರದುರ್ಗ ಪೊಲೀಸರ ಮೊರೆ ಹೋಗಿದ್ದಾರೆ.

ಪೋಷಕರಿಂದ ಜೀವ ಭಯವಿದೆ

ಇನ್ನು ಬಳ್ಳಾರಿ ಮೂಲದ ವಿಜಯಕುಮಾರ್ ಸದ್ಯ ಚಿತ್ರದುರ್ಗದಲ್ಲಿ ಚಿತ್ರಮಂದಿರದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ಮಾನಸಾಳ ಪೋಷಕರಿಂದ ತೊಂದರೆ ಆಗುವ ಭಯವಿದ್ದು ರಕ್ಷಣೆ ನೀಡಬೇಕೆಂದು
ಚಿತ್ರದುರ್ಗ ಹಾಗೂ ಬಳ್ಳಾರಿ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಆದ್ರೆ, ಪೊಲೀಸರು ಸೂಕ್ತ ರಕ್ಷಣೆ ಒದಗಿಸಿಲ್ಲ, ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಪ್ರೇಮಜೋಡಿ ಆರೋಪಿಸಿದೆ.

ಒಟ್ಟಾರೆ ಯುವಜೋಡಿಗೆ ಪೋಷಕರೇ ವಿಲನ್ ಆಗಿದ್ದು ಪ್ರಜ್ಞೆ ತಪ್ಪಿಸಿ ಮರು ಮದುವೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಬಳ್ಳಾರಿಯ ಕೌಲ್ ಬಜಾರ್ ಹಾಗೂ ಚಿತ್ರದುರ್ಗ ನಗರ ಠಾಣೆಗೆ ದೂರು ನೀಡಿದ್ದೇವೆ ಎಂದು ಪ್ರೇಮಿಗಳು ಹೇಳಿದ್ದಾರೆ. ಹೀಗಾಗಿ, ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಪ್ರೇಮಜೋಡಿಗೆ ಸೂಕ್ತ ರಕ್ಷಣೆ ಒದಗಿಸಬೇಕಿದೆ

Comments are closed.