ರಾಷ್ಟ್ರೀಯ

ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗವೇನೂ ಅಲ್ಲ: ಫಾರೂಕಿ ಪ್ರಕರಣದ ತೀರ್ಪನ್ನು ಎತ್ತಿಹಿಡಿದ ಸುಪ್ರೀಂ

Pinterest LinkedIn Tumblr

ನವದೆಹಲಿ: ಮಸೀದಿ ಇಸ್ಲಾಮ್ ನ ಅವಿಭಾಜ್ಯ ಅಂಗವಲ್ಲ ಎಂಬ 1994 ರ ಫಾರೂಕಿ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ಎತ್ತಿ ಹಿಡಿದಿದೆ.

ಮಸೀದಿಯು ಇಸ್ಲಾಮ್ ನ ಅವಿಭಾಜ್ಯ ಅಂಗವಾಗಿಲ್ಲ ಎಂದಿದ್ದ ಇಸ್ಮಾಯಿಲ್ ಫಾರೂಕಿ ತೀರ್ಪಿನ ಪರಿಶೀಲನೆ ಸಂಬಂಧ ಸೆ.27 ರಂದು ಮಹತ್ವದ ತೀರ್ಪು ಪ್ರಕಟಿಸಿರುವ ಮುಖ್ಯ ನ್ಯಾ. ದೀಪಕ್ ಮಿಶ್ರ, ಅಶೋಕ್ ಭೂಷನ್, ನ್ಯಾ. ನಜೀರ್ ಅವರಿದ್ದ ತ್ರಿಸದಸ್ಯ ಪೀಠದ ಪೈಕಿ ನ್ಯಾ. ಅಶೋಕ್ ಭೂಷಣ್ ಹಾಗೂ ನ್ಯಾ. ದೀಪಕ್ ಮಿಶ್ರಾ ಮಸೀದಿಯು ಇಸ್ಲಾಮ್ ನ ಅವಿಭಾಜ್ಯ ಅಂಗವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದು, 1994 ರ ಫಾರೂಕಿ ಪ್ರಕರಣದ ತೀರ್ಪನ್ನೇ ಎತ್ತಿ ಹಿಡಿದೆ. ಅಷ್ಟೇ ಅಲ್ಲದೇ 1994 ರ ಪ್ರಕರಣದ ತೀರ್ಪಿನ ಅಂಶಗಳನ್ನು ಪರಿಶೀಲಿಸಲು ಈ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಯಾವುದೇ ಧರ್ಮದ ಸ್ಥಳಗಳನ್ನು ಸರ್ಕಾರಗಳು ವಶಕ್ಕೆ ಪಡೆಯಬಹುದು ಎಂಬುದನ್ನೂ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠದ ನ್ಯಾಯಮೂರ್ತಿಗಳು ಹೇಳಿದ್ದಾರೆ.

ಇದೇ ವೇಳೆ ಫಾರೂಕಿ ಪ್ರಕರಣದ ತೀರ್ಪನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಬೇಕೆಂದು ನ್ಯಾ.ನಜೀರ್ ಅಭಿಪ್ರಾಯಪಟ್ಟಿದ್ದು, ತೀರ್ಪಿನ ಸಂಬಂಧ ಇನ್ನಿಬ್ಬರು ಸಹೋದ್ಯೋಗಿ ನ್ಯಾಯಮೂರ್ತಿಗಳ ಅಭಿಪ್ರಾಯಕ್ಕೆ ನನ್ನ ಸಹಮತ ಇಲ್ಲ, ಮಸೀದಿ ಇಸ್ಲಾಂ ನ ಅವಿಭಾಜ್ಯ ಅಂಗವೇ ಎಂಬ ವಿಷಯವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಬೇಕು ಎಂದು ಹೇಳಿದ್ದಾರೆ.

Comments are closed.