ರಾಷ್ಟ್ರೀಯ

ರಾಜ್ಯದ ಪರಿಶಿಷ್ಟ ಉದ್ಯೋಗಿಗಳ ಮುಂಬಡ್ತಿ ಮೀಸಲಿಗೆ ಹಿಂದುಳಿದಿರುವಿಕೆ ಸಮೀಕ್ಷೆ ಬೇಕಿಲ್ಲ: ಸುಪ್ರೀಂ

Pinterest LinkedIn Tumblr


ಹೊಸದಿಲ್ಲಿ/ಬೆಂಗಳೂರು: ಪರಿಶಿಷ್ಟ ಸಮುದಾಯದ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲು ನೀಡಬೇಕೆಂದರೆ ಅವರ ಹಿಂದುಳಿದಿರುವಿಕೆಯ ಖಚಿತತೆಯನ್ನು ಪರೀಕ್ಷೆ ನಡೆಸಬೇಕೆಂಬ ತನ್ನ ಹಿಂದಿನ ತೀರ್ಪಿನ ಆದೇಶವನ್ನು ಬುಧವಾರ ರದ್ದು ಪಡಿಸಿದ ಸುಪ್ರೀಂಕೋರ್ಟ್‌, ಮುಂಬಡ್ತಿಯಲ್ಲಿ ಮೀಸಲು ನೀತಿ ಬೇಕೆ ಬೇಡವೇ ಎಂಬುದರ ಕುರಿತು ನೇರ ಪದಗಳಲ್ಲಿ ಯಾವುದೇ ರೀತಿಯ ಆದೇಶ ನೀಡಲಿಲ್ಲ. ಹಾಗಾಗಿ, ಪರಿಶಿಷ್ಟರ ಹಿತರಕ್ಷಣೆಗೆ ರಾಜ್ಯ ಸರಕಾರ ತಂದಿರುವ ಕಾಯಿದೆಯ ಭವಿಷ್ಯ ಜೀವಂತವಾಗಿದೆ.

ಬಡ್ತಿಯಲ್ಲಿ ಮೀಸಲು ನೀಡುವಿಕೆಗೆ ಸಂಬಂಧಿಸಿದಂತೆ ಅಕ್ಟೋಬರ್‌ 3ರಂದು ಬಿ.ಕೆ. ಪವಿತ್ರ ಪ್ರಕರಣ ಕುರಿತ ವಿಚಾರಣೆಯೊಂದು ಸುಪ್ರೀಂ ಅಂಗಳದಲ್ಲಿ ನಡೆಯಲಿದ್ದು, ಅಂದು ಕಾಯಿದೆಯ ಭವಿಷ್ಯವೇನಾಗಲಿದೆ ಎನ್ನುವುದರ ಸ್ಪಷ್ಟ ಚಿತ್ರಣ ದೊರೆಯುವ ನಿರೀಕ್ಷೆಯಿದೆ.

ಎಂ. ನಾಗರಾಜ್‌ ಪ್ರಕರಣ ಸಂಬಂಧ 2006 ರಲ್ಲಿ ಸುಪ್ರೀಕೋರ್ಟ್‌ ಪ್ರಕಟಿಸಿದ ತೀರ್ಪಿನ ಪುನರ್‌ ಪರಿಶೀಲನೆಯನ್ನು 7 ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲವೆಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರ ನೇತೃತ್ವದ ಪೀಠವು ಹೇಳಿದೆ. ಈ ಸಂಬಂಧದಲ್ಲಿ ಕೇಂದ್ರ ಸರಕಾರ ಸೇರಿದಂತೆ ನಾನಾ ರಾಜ್ಯಗಳು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದವು. ಈ ಪ್ರಕರಣದ ರೂವಾರಿ ಎಂ. ನಾಗರಾಜ್‌ ಕರ್ನಾಟಕದವರು ಎಂಬುದು ಗಮನಾರ್ಹ. ನಂತರ 2017ರ ಫೆಬ್ರವರಿಯಲ್ಲಿ ರಾಜ್ಯದಲ್ಲಿನ ಬಡ್ತಿ ಮೀಸಲು ಪ್ರಕರಣ (ಬಿ.ಕೆ. ಪವಿತ್ರ) ಸಂಬಂಧವೂ ನಾಗರಾಜ್‌ ಪ್ರಕರಣ ಆಧರಿಸಿಯೇ ಸುಪ್ರೀಕೋರ್ಟ್‌ ಮಹತ್ವದ ಆದೇಶ ನೀಡಿತ್ತು. ನಂತರ ಅದು ನಾನಾ ಆಯಾಮ ಪಡೆದುಕೊಂಡಿದೆ.

ಬಿ.ಕೆ. ಪವಿತ್ರ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ ತೀರ್ಪನ್ನು ಯಥಾವತ್ತು ಜಾರಿಗೊಳಿಸಿದರೆ ರಾಜ್ಯದ ಎಸ್‌ಸಿ, ಎಸ್‌ಟಿ ಅಧಿಕಾರಿಗಳು ಹಾಗೂ ನೌಕರರಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟರ ಹಿತ ಕಾಯಲು ಮುಂದಾದ ಸಿದ್ದರಾಮಯ್ಯ ನೇತೃತ್ವದ ಸರಕಾರ ವಿಧೇಯಕ ಪಾಸು ಮಾಡಿತ್ತು. ಬಳಿಕ ಈ ವಿಧೇಯಕಕ್ಕೆ ರಾಷ್ಟ್ರಪತಿ ಅವರು ಅಂಕಿತ ಹಾಕಿದ್ದಾರೆ. ಇದರ ಗೆಜೆಟ್‌ ಅಧಿಸೂಚನೆಯೂ ಆಗಿರುವುದರಿಂದ ಕಾಯಿದೆಯ ಸ್ವರೂಪ ಪಡೆದುಕೊಂಡಿದೆ. ಒಟ್ಟಾರೆಯಾಗಿ ಬಡ್ತಿ ಮೀಸಲು ಕುರಿತ ನಾನಾ ಪ್ರಕರಣಗಳ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿಯಿದ್ದಿದ್ದರಿಂದ ಈ ಕಾಯಿದೆ ಅನುಷ್ಠಾನಕ್ಕೆ ತಡೆಯುಂಟಾಗಿತ್ತು.

ಅಕ್ಟೋಬರ್‌ 3 ರಂದು ಬಿ.ಕೆ. ಪವಿತ್ರ ಪ್ರಕರಣ ಕುರಿತ ವಿಚಾರಣೆಯೊಂದು ಸುಪ್ರೀಂ ಅಂಗಳದಲ್ಲಿ ನಡೆಯಲಿದೆ. ಪವಿತ್ರ ಜಜ್‌ಮೆಂಟ್‌ ಜಾರಿ ಮಾಡದೆ ಇರುವ ರಾಜ್ಯ ಸರಕಾರದ ಧೋರಣೆ ಪ್ರಶ್ನಿಸಿ ಸಾಮಾನ್ಯ ವರ್ಗದ ಅಧಿಕಾರಿಗಳು ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಅದರ ಅಂತಿಮ ವಿಚಾರಣೆ ಅಂದು ಬರಲಿದೆ. ಜತೆಗೆ ರಾಜ್ಯದ ಕಾಯಿದೆಯ ವಿಚಾರವಾಗಿಯೂ ಇದೇ ವೇಳೆ ಸ್ಪಷ್ಟ ಸೂಚನೆ ಕೊಡುವ ಸಾಧ್ಯತೆಯಿದೆ ಎಂದು ಕಾನೂನು ತಜ್ಞರು ಹೇಳುತ್ತಾರೆ.

ಅವಕಾಶ ಇನ್ನೂ ಇದೆ

ಮೀಸಲು ಬಡ್ತಿ ವಿಷಯದಲ್ಲಿ ರಾಜ್ಯ ಸರಕಾರಗಳು ಪರಿಶಿಷ್ಟರ ಪ್ರಾತಿನಿಧ್ಯದ ಕೊರತೆ ಬಗ್ಗೆ ಪೂರಕ ದಾಖಲೆ ಒದಗಿಸಲಿ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ನ್ಯಾಯಪೀಠ ಹೇಳಿದೆ. ಈ ಅಂಶ ಕೂಡ ರಾಜ್ಯದ ಕಾಯಿದೆ ಕುರಿತು ಭರವಸೆ ತಾಳುವಂತಾಗಿದೆ. ಪವಿತ್ರ ಪ್ರಕರಣದ ತೀರ್ಪಿನ ಬಳಿಕ ರಾಜ್ಯದಲ್ಲಿ ಮೀಸಲಿನಡಿ ಎಲ್ಲ ಇಲಾಖೆ, ಸರಕಾರಿ ಸ್ವಾಮ್ಯದ ಸಂಸ್ಥೆಗಳ ಸಾವಿರಾರು ಮಂದಿಗೆ ಬಡ್ತಿ ನೀಡಿರುವುದು ಗಮನಕ್ಕೆ ಬಂದಿತ್ತು. ನಂತರ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ತಯಾರಿಸಲಾಗಿದೆ. ಅದರಂತೆ, ಮೀಸಲಿನಡಿ ಬಡ್ತಿ ಗಳಿಸಿದ್ದ 3,750 ಅಧಿಕಾರಿ ಹಾಗೂ ನೌಕರರಿಗೆ ಹಿಂಬಡ್ತಿಯಾಗಿದೆ. ಹೀಗೆ ಹಿಂಬಡ್ತಿಗೆ ಒಳಗಾದವರನ್ನು ರಕ್ಷಿಸುವ ಉದ್ದೇಶದಿಂದಲೇ ಕಾಯಿದೆ ತರಲಾಗಿದೆ.

ಮೀಸಲು ಪ್ರಕರಣದಿಂದಾಗಿ ಹಿಂಬಡ್ತಿ ಹೊಂದಿದ ಪರಿಶಿಷ್ಟರಿಗೆ ಸಂಖ್ಯಾಧಿಕ ಕೋಟಾದಡಿ (ಎಸ್‌ಎನ್‌ಕ್ಯೂ/ ಸೂಪರ್‌ ನ್ಯೂಮರರಿ ಕೋಟಾ) ಮೊದಲಿನ ಸ್ಥಾನವನ್ನೇ ಕಲ್ಪಿಸಬೇಕು ಎನ್ನುವುದು ರಾಜ್ಯದ ಕಾಯಿದೆಯಲ್ಲಿ ಅಡಕವಾಗಿರುವ ಪ್ರಮುಖಾಂಶ. ಅಕ್ಟೋಬರ್‌ ಮೊದಲ ವಾರ ನಡೆಯುವ ವಿಚಾರಣೆಯಲ್ಲಿ ರಾಜ್ಯದ ಕಾಯಿದೆಯ ವಿಚಾರ ಇತ್ಯರ್ಥಗೊಂಡರೆ ಸಂಖ್ಯಾಧಿಕ ಕೋಟಾದಡಿ ಪರಿಶಿಷ್ಟ ನೌಕರರು ಮೊದಲಿನ ಸ್ಥಾನ ಪಡೆಯಲು ದಾರಿ ಸುಗಮವಾಗಲಿದೆ.

ರಾಜ್ಯದ ಮೇಲಿನ ಪರಿಣಾಮ

* ಹಿಂಬಡ್ತಿಗೊಳಗಾದ ಎಸ್‌ಸಿ, ಎಸ್‌ಟಿಗಳ ಹಿತರಕ್ಷಣೆ
* ಎಸ್‌ಸಿ, ಎಸ್‌ಟಿಗಳ ಪ್ರಾತಿನಿಧ್ಯದ ಕೊರತೆಯ ಸೂಕ್ತ ದಾಖಲೆ ಒದಗಿಸಬೇಕು
* ರಾಜ್ಯದ ಕಾಯಿದೆಯಂತೆ ಸಂಖ್ಯಾಧಿಕ ಕೋಟಾದಡಿ ಎಸ್‌ಸಿ, ಎಸ್‌ಟಿಗಳ ಬಡ್ತಿ ರಕ್ಷಣೆಯೂ ಸಾಧ್ಯ
* ಶೇ.18 ರಷ್ಟು ಮೀಸಲು ಮುಂದುವರಿಸಲು ಅಡ್ಡಿಯಿಲ್ಲ

Comments are closed.