ಕರ್ನಾಟಕ

ಈಗಿನ ರಾಜಕೀಯ ವಿದ್ಯಮಾನಗಳಿಗೆ ಫ‌ುಲ್‌ಸ್ಟಾಪ್‌ ಹಾಕಿದ್ದೇನೆ: ದೇವೇಗೌಡ

Pinterest LinkedIn Tumblr


ಚಿಕ್ಕಮಗಳೂರು: ರಾಜ್ಯ ರಾಜಕೀಯದಲ್ಲಿರುವ ಗೊಂದಲಗಳು ಇನ್ನು ಒಂದು ತಿಂಗಳೊಳಗೆ ಬಗೆಹರಿಯಲಿವೆ. ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯೂ ಇಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ನಡೆಯುತ್ತಿದ್ದ ರಾಜಕೀಯ ವಿದ್ಯಮಾನಕ್ಕೆ ಫುಲ್‌ಸ್ಟಾಪ್‌ ಹಾಕಿದ್ದೇನೆ. ವಿರೋಧ ಪಕ್ಷದವರು, ಕಾಂಗ್ರೆಸ್‌ ಸ್ನೇಹಿತರು, ಬೇರೆ, ಬೇರೆ ರೀತಿ ಮಾತನಾಡುತ್ತಿದ್ದಾರೆ. ಅದಕ್ಕೆಲ್ಲ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಬಹುಶ: ಎಲ್ಲಾ ಗೊಂದಲಗಳು ಅಂತ್ಯವಾಗುತ್ತವೆ ಎಂಬ ನಂಬಿಕೆ ಇದೆ. ಇನ್ನೊಂದು ತಿಂಗಳಲ್ಲಿ ಎಲ್ಲಾ ಗೊಂದಲಗಳು ಬಗೆಹರಿಯಲಿವೆ. ಈಗ ಸಣ್ಣಪುಟ್ಟ ಗೊಂದಲಗಳಿವೆ. ಆದರೆ, ಮೈತ್ರಿ ಸರ್ಕಾರದಲ್ಲಿ ಯಾವುದೇ ಒಡಕು ಬಾರದಂತೆ ನೋಡಿಕೊಳ್ಳಲಾಗುತ್ತಿದೆ. ಇದರಲ್ಲಿ ಎರಡೂ ಪಕ್ಷಗಳ ಜವಾಬ್ದಾರಿ ಇದೆ. ಆ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸರ್ಕಾರಕ್ಕೆ ಅಪಾಯ ಆಗುವುದಿಲ್ಲ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಅದೇ ರೀತಿ ಹೇಳಿದ್ದಾರೆ. ಮೈತ್ರಿ ಸರ್ಕಾರದಲ್ಲಿರುವ ಸಣ್ಣ ಪುಟ್ಟ ಸಮಸ್ಯೆಗಳೆಲ್ಲ ಹಂತ ಹಂತವಾಗಿ ಬಗೆಹರಿಯಲಿವೆ ಎಂದರು.ಬಿಜೆಪಿ ರೆಸಾರ್ಟ್‌ ರಾಜಕಾರಣಕ್ಕೆ ಮುಂದಾಗಿದೆಯಲ್ಲ ಎಂದು ಸುದ್ದಿಗಾರರು ಪ್ರಶ್ನಿಸುತ್ತಿದ್ದಂತೆ ಕೈ ಮುಗಿದು ಬೇಸರ ವ್ಯಕ್ತಪಡಿಸಿದರು.

ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಬಗ್ಗೆ ಸುಪ್ರೀಂಕೋರ್ಟ್‌ ಉತ್ತಮ ತೀರ್ಪು ನೀಡಿದೆ. ಇಷ್ಟ ಇದ್ದವರು ದೇವಾಲಯಕ್ಕೆ ಹೋಗುತ್ತಾರೆ, ಇಷ್ಟ ಇಲ್ಲದವರು ಹೋಗುವುದಿಲ್ಲ. ಲಿಂಗ ತಾರತಮ್ಯ ಮಾಡಬಾರದೆಂದು ಸುಪ್ರೀಂಕೋರ್ಟ್‌ ಇಂತಹ ಆದೇಶ ನೀಡಿದೆ. ಈ ತೀರ್ಪನ್ನು ಸ್ವಾಗತಿಸುತ್ತೇನೆ.
– ದೇವೇಗೌಡ, ಮಾಜಿ ಪ್ರಧಾನಿ.

Comments are closed.