ಅಂತರಾಷ್ಟ್ರೀಯ

ಜೋಡಿಯೊಂದು ಬುಕ್ ಮಾಡಿದ್ದ ಉಬರ್ ಕಾರಿನ ಡ್ರೈವರ್ ಪ್ರೇಯಸಿಯ ಗಂಡನಾಗಿದ್ದ!

Pinterest LinkedIn Tumblr


ಕೆಲವೊಮ್ಮೆ ಟೈಂ ಚೆನ್ನಾಗಿರದಿದ್ದರೆ ನಮ್ಮ ಅದೃಷ್ಟ ಯಾವ ರೀತಿ ಕೈಕೊಡುತ್ತದೆ ಎಂದು ಹೇಳಲಾಗದು. ನಾವು ಮಾಡುವ ತಪ್ಪು ಯಾರ ಗಮನಕ್ಕೂ ಬಂದಿಲ್ಲ ಎಂದುಕೊಂಡೇ ಧೈರ್ಯದಿಂದ ಅನೇಕರು ತಪ್ಪು ದಾರಿಯಲ್ಲಿ ಸಾಗುತ್ತಾರೆ. ಆದರೆ, ತಪ್ಪು ದಾರಿಯಲ್ಲಿ ಸಾಗುವಾಗ ಸರಿಯಾದ ವ್ಯಕ್ತಿಯ ಕೈಯಲ್ಲಿ ಸಿಕ್ಕಿಹಾಕಿಕೊಂಡರೆ ಹೇಗಿರುತ್ತದೆ? ನಾವು ಹೇಳಹೊರಟಿರುವುದು ಕೂಡ ಅಂಥದ್ದೇ ಒಂದು ಘಟನೆ…

ಕೊಲಂಬಿಯಾದಲ್ಲಿ ಪ್ರೇಮಿಗಳಿಬ್ಬರು ಸ್ವಚ್ಛಂದವಾಗಿ ಸುತ್ತಾಡಿಕೊಂಡಿದ್ದರು. ಹುಡುಗನಿಗೆ ಅದು ಮೊದಲ ಪ್ರೇಮ. ಆದರೆ, ಆತನ ಪ್ರೇಯಸಿ ಅದಾಗಲೇ ಬೇರೆಯವರ ಹೆಂಡತಿಯಾಗಿದ್ದವಳು. ತನ್ನ ಗಂಡನಿಗೆ ಗೊತ್ತಾಗದ ಹಾಗೆ ಪ್ರಿಯಕರನ ಜೊತೆಗೆ ಸುತ್ತಾಡುತ್ತಾ, ಪ್ರೇಮಲೋಕದಲ್ಲಿ ತೇಲುತ್ತಿದ್ದ ಆಕೆಗೆ ಆ ದಿನ ಅತ್ಯಂತ ದುರಾದೃಷ್ಟದ ದಿನ.
ಅಂದು ಎಲ್ಲಾದರೂ ಸುತ್ತಾಡಬೇಕು ಎಂದು ಪ್ಲಾನ್​ ಮಾಡಿಕೊಂಡಿದ್ದ ಆ ಜೋಡಿ ಒಳ್ಳೆಯ ಮೂಡ್​ನಲ್ಲಿತ್ತು. ಹೊರಗೆ ಹೋಗಲು ಪ್ರಿಯಕರ ಉಬರ್​ ಬುಕ್​ ಮಾಡಿದ. ಉಬರ್​ ಕಾರ್ ಡೋರ್​ ತೆಗೆದು ಕುಳಿತ ಆಕೆಗೆ ಆಶ್ಚರ್ಯದ ಜೊತೆಗೆ ಆಘಾತವೂ ಕಾದಿತ್ತು. ಯಾಕೆಂದರೆ ಡ್ರೈವರ್​ ಸೀಟ್​ನಲ್ಲಿ ಕುಳಿತಿದ್ದವರು ಬೇರ್ಯಾರೂ ಅಲ್ಲ; ಸ್ವತಃ ಆಕೆಯ ಗಂಡ!

ತನ್ನ ಪ್ರಿಯಕರನ ಜೊತೆಯಲ್ಲಿದ್ದಾಗ ರೆಡ್​ಹ್ಯಾಂಡ್​ ಆಗಿ ಗಂಡನ ಎದುರು ಸಿಕ್ಕಿಬಿದ್ದ ಆಕೆಗೆ ಏನು ಮಾಡಬೇಕೆಂದೇ ತಿಳಿಯಲಿಲ್ಲ. ಒಂದು ವರ್ಷದಿಂದ ಗುಟ್ಟಾಗಿಟ್ಟಿದ್ದ ಅವರ ಪ್ರೇಮ ಸಂಬಂಧ ರಟ್ಟಾಗಿತ್ತು. ನಗರದಿಂದ ಹೊರಹೋಗಿ ಖಾಸಗಿ ಸಮಯವನ್ನು ಬಯಸಿದ್ದ ಆ ಜೋಡಿ ಉಬರ್​ ಬುಕ್​ ಮಾಡಿತ್ತು. ಆದರೆ, ಆ ದಿನ ತನ್ನ ಗಂಡ ಆತನ ಸ್ನೇಹಿತನ ಉಬರ್ ಕಾರನ್ನು ಡ್ರೈವ್​ ಮಾಡಿಕೊಂಡು ಬಂದಿದ್ದಾನೆ ಎಂಬುದು ಆಕೆಗೆ ಗೊತ್ತಿರಲಿಲ್ಲ. ಉಬರ್​ ಕೋಡ್​ ಸಹ ಆತನ ಸ್ನೇಹಿತನದ್ದೇ ಆಗಿದ್ದರಿಂದ ಬುಕ್​ ಮಾಡುವಾಗಲೂ ಆಕೆಗೆ ಅನುಮಾನ ಬರಲಿಲ್ಲ.

ತನ್ನ ಹೆಂಡತಿ ಬೇರೊಬ್ಬ ಪುರುಷನ ಜೊತೆಯಲ್ಲಿ ಸುತ್ತಾಡಲು ಹೊರಟಿರುವುದನ್ನು ನೋಡಿದ ಗಂಡ ರಸ್ತೆಯಲ್ಲೇ ಇಳಿದು ಜಗಳವಾಡಲಾರಂಭಿಸಿದ. ಗಂಡನನ್ನು ಸಮಾಧಾನ ಮಾಡಲು ಆಕೆ ಪ್ರಯತ್ನಿಸಿದರೂ ಸುಮ್ಮನಾಗದ ಆತ ಬೀದಿಯಲ್ಲೇ ರಂಪಾಟವಾಡಿದ ಎಂದು ಕೆಲ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. ಇನ್ನು ಕೆಲವು ಪತ್ರಿಕೆಗಳಲ್ಲಿ ಗಂಡನನ್ನು ನೋಡಿದ ಕೂಡಲೆ ಆಕೆ ತನ್ನ ಪ್ರಿಯಕರನ ಜೊತೆ ಕಾರಿನಿಂದಿಳಿದು ಓಡಿಹೋದಳು ಎಂದು ಬರೆದಿವೆ.

ಆದರೆ, ಗಂಡ ಏನೂ ಮಾಡುವ ಹಾಗಿರಲಿಲ್ಲ. ಈ ಬಗ್ಗೆ ದೂರು ನೀಡಲು ಸಾಧ್ಯವಿರಲಿಲ್ಲ. ಏಕೆಂದರೆ ಬೇರೊಬ್ಬರ ಉಬರ್​ ಅಕೌಂಟ್​ ಬಳಸಿಕೊಂಡು ಇನ್ನೊಬ್ಬ ಡ್ರೈವ್​ ಮಾಡುವುದು ಕಾನೂನು ಪ್ರಕಾರ ತಪ್ಪು. ಈ ಬಗ್ಗೆ ಉಬರ್​ ತನ್ನ ವೆಬ್​ಸೈಟ್​ನಲ್ಲಿ ಸ್ಪಷ್ಟವಾಗಿ ನಮೂದಿಸಿದೆ. ಯಾವುದೇ ಕಾರಣಕ್ಕೂ ನಿಮ್ಮ ಉಬರ್​ ಅಕೌಂಟನ್ನು ಹೊಂದಿರುವ ಕಾರನ್ನು ಬೇರೊಬ್ಬರಿಗೆ ನೀಡಬಾರದು. ಅದರಿಂದ ಗ್ರಾಹಕರು ನಮ್ಮ ಮೇಲಿಟ್ಟಿರುವ ನಂಬಿಕೆಯನ್ನು ನಾವು ಕಳೆದುಕೊಳ್ಳುತ್ತೇವೆ ಎಂದು ನಮೂದಿಸಿದೆ.

ಆದರೂ, ತಂತ್ರಜ್ಞಾನ ಬಹಳ ಮುಂದುವರಿದಿರುವುದರಿಂದ ಗಂಡ ಹೆಂಡತಿಯ ಕಣ್ಣು ತಪ್ಪಿಸಿ ಅಥವಾ ಹೆಂಡತಿ ಗಂಡನ ಕಣ್ಣು ತಪ್ಪಿಸಿ ಬೇರೊಬ್ಬರ ಜೊತೆ ಕಳ್ಳ ವ್ಯವಹಾರ ಇಟ್ಟುಕೊಂಡಿರುವುದನ್ನು ಪತ್ತೆಹಚ್ಚಲು ಕಷ್ಟವೇನಲ್ಲ ಎಂಬುದಕ್ಕೆ ಇದೊಂದು ಉದಾಹರಣೆ.

Comments are closed.