ಕರ್ನಾಟಕ

ಕಾಲಮಿತಿ ಮೀರಿದರೆ ಜೈಲು; ಅಧಿಕಾರಿಗಳಿಗೆ ಕುಮಾರಸ್ವಾಮಿ ಖಡಕ್ ಎಚ್ಚರಿಕೆ

Pinterest LinkedIn Tumblr


ಬೆಂಗಳೂರು: “ರಾಜ್ಯದ ಪರಿಶಿಷ್ಟ ಜಾತಿ, ಪಂಗಡದವರ ಕಲ್ಯಾಣಕ್ಕಾಗಿ ಪ್ರಸಕ್ತ ವರ್ಷದಲ್ಲಿ 29,000 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದ್ದು, ಆಯಾ ಇಲಾಖಾ ಅಧಿಕಾರಿಗಳು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಕಾಲಮಿತಿಯಲ್ಲಿ ಅನುದಾನ ಬಳಸಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಜೈಲಿಗೆ ಹೋಗಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ರಾಜ್ಯ ಅನುಸೂಚಿತ ಜಾತಿಗಳು/ ಅನುಸೂಚಿತ ಪಂಗಡಗಳ ಅಭಿವೃದ್ಧಿ (ಎಸ್‌ಸಿಪಿ-ಟಿಎಸ್‌ಪಿ) ಕುರಿತಂತೆ ವಿಧಾನಸೌಧದಲ್ಲಿ ಶುಕ್ರವಾರ ನಡೆದ ರಾಜ್ಯ ಪರಿಷತ್‌ ಸಭೆಯ ಅಧ್ಯಕ್ಷತೆ ವಹಿಸಿದ ಪಾಲ್ಗೊಂಡ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪಂಗಡದವರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನ ಯೋಜನಾ ಗಾತ್ರದಲ್ಲಿ ಅನುದಾಯ ಕಾಯ್ದಿರಿಸುವ ಕಾಯ್ದೆಯನ್ನು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿತ್ತು. ಅದರಂತೆ ಅನುದಾನ ಬಳಸದ ಸಂಬಂಧಪಟ್ಟ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸುವ ಪ್ರಕ್ರಿಯೆಗೆ ಇದೀಗ ಚಾಲನೆ ನೀಡಲಾಗಿದೆ ಎಂದು ಹೇಳಿದರು.

2013ಕ್ಕೂ ಮೊದಲು ಪರಿಶಿಷ್ಟ ಜಾತಿ, ಪಂಗಡದವರ ಕಲ್ಯಾಣಕ್ಕಾಗಿ ವಾರ್ಷಿಕ ಸುಮಾರು 8000 ಕೋಟಿ ರೂ. ಅನುದಾನ ನೀಡಲಾಗುತ್ತಿತ್ತು. ಹಂತ ಹಂತವಾಗಿ ಇಲಾಖಾವಾರು ಕಾರ್ಯಕ್ರಮಗಳನ್ನು ರೂಪಿಸಿ ಕಳೆದ ವರ್ಷ 22,000 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿತ್ತು. ಪ್ರಸಕ್ತ ವರ್ಷ 29,000 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಈ ಅನುದಾನ ಕಾಲಮಿತಿಯೊಳಗೆ ಶೇ.100ರಷ್ಟು ಸದ್ಬಳಕೆಯಾಗಬೇಕೆಂಬ ಉದ್ದೇಶದಿಂದ ಅಧಿಕಾರಿಗಳ ಸಭೆ ನಡೆಸಿ ಕೆಲ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

1.4 ಕೋಟಿ ಫ‌ಲಾನುಭವಿಗಳಿಗೆ ಸೌಲಭ್ಯ
ಎಸ್‌ಸಿಪಿಟಿಎಸ್‌ಪಿ ಕಾಯ್ದೆಯನುಸಾರ ಅನುದಾನ ಹಂಚಿಕೆಯಾದರೂ ಬಳಕೆಗೆ ಸ್ಪಷ್ಟ ಮಾರ್ಗಸೂಚಿ ಇರಲಿಲ್ಲ. ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಎರಡೂವರೆ ತಿಂಗಳು ಸಭೆ, ಪರಿಶೀಲನೆ ನಡೆಸಿ ಸರ್ಕಾರದ ಆಶಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪೂರಕ ಮಾರ್ಗಸೂಚಿಗಳನ್ನು ರೂಪಿಸಿದ್ದಾರೆ. ಅದರಂತೆ ಇಲಾಖೆಗಳು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಿವೆ. ಇಲಾಖೆಯು ಈಗಾಗಲೇ 1.40 ಕೋಟಿ ಫ‌ಲಾನುಭವಿಗಳನ್ನು ಗುರುತಿಸಲು ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಹಣ ಪೂರ್ಣ ಬಳಕೆಯಾಗುತ್ತಿರಲಿಲ್ಲ
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಾಯ್ದೆ ಜಾರಿಗೊಳಿದ್ದರೂ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿರಲಿಲ್ಲ. ಕೆಲ ಇಲಾಖೆ ಅಧಿಕಾರಿಗಳು ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡುವುದು ಸೇರಿ ಇತರೆ ಕ್ರಮಗಳಿಂದ ಶೇ.100ರಷ್ಟು ಅನುದಾನ ಬಳಸುತ್ತಿರಲಿಲ್ಲ. ಇದೀಗ ಹಣ ವೆಚ್ಚ ಮಾಡಿ ಕಾರ್ಯಕ್ರಮ ಅನುಷ್ಠಾನಗೊಳಿಸದೆ ನಿರ್ಲಕ್ಷ್ಯ ತೋರುವವರು ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ಹೇಳಿದರು.

ಹಿಂದೆ ಕಾಯ್ದೆಯಿದ್ದರೂ ನಿಯಮಾವಳಿಗಳನ್ನು ರೂಪಿಸಿರಲಿಲ್ಲ. ಇದೀಗ ನಿಯಮಾವಳಿ ರಚನೆಯಾಗಿದ್ದು, ಶಿಕ್ಷೆಗೆ ಅವಕಾಶವಿದೆ. ಹಾಗಾಗಿ ಸೂಕ್ತ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಬೇಕು. ದುರ್ಬಳಕೆಯಾಗದಂತೆ ಎಚ್ಚರ ವಹಿಸಬೇಕು. ಕಾಲಮಿತಿಯಲ್ಲಿ ಅನುದಾನ ಬಳಸಬೇಕು ಎಂದು ಸೂಚಿಸಲಾಗಿದೆ. ಅನುದಾನ ಬಳಸಲೇಬೇಕು. ನಿರ್ಲಕ್ಷಿಸಿದರೆ ಜೈಲಿಗೆ ಹೋಗಬೇಕಾಗುತ್ತದೆ. ಸಮರ್ಪಕವಾಗಿ ಸಕಾಲದಲ್ಲಿ ಬಳಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Comments are closed.