ಕರ್ನಾಟಕ

ಕಾಂಗ್ರೆಸ್‌ ಬಿಟ್ಟು ಬಂದರೆ ನನಗೆ ಸಚಿವ ಸ್ಥಾನ, 30 ಕೋಟಿ ಆಫರ್‌ ಬಂದಿತ್ತು: ಲಕ್ಷ್ಮಿ ಹೆಬ್ಟಾಳ್ಕರ್‌

Pinterest LinkedIn Tumblr


ಬೆಳಗಾವಿ: ಕಾಂಗ್ರೆಸ್‌ ಬಿಟ್ಟು ಬಂದರೆ ಸಚಿವ ಸ್ಥಾನ ಹಾಗೂ 30 ಕೋಟಿ ರೂ. ಆಫರ್‌ ಬಂದಿತ್ತು ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.

ಅಷ್ಟೇ ಅಲ್ಲದೆ, ವಿಧಾನಸಭೆ ಚುನಾವಣೆಯಲ್ಲಿ ಯಾವುದೋ ಹವಾದಲ್ಲಿ ಹೆಬ್ಟಾಳ್ಕರ್‌ ಗೆದ್ದು ಬಂದಿದ್ದಾಳೆ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ನನ್ನ ಕ್ಷೇತ್ರದಲ್ಲಿ ಒಂದು ಲಕ್ಷ ಮತ ಕೊಡಿಸುತ್ತೇನೆ. ಆಗ ನಾನು ಜಾಳ್ಳೋ, ಗಟ್ಟಿಯೋ ಎನ್ನುವುದು ಗೊತ್ತಾಗುತ್ತದೆ ಪರೋಕ್ಷವಾಗಿ ಜಾರಕಿಹೊಳಿ ಸಹೋದರರಿಗೆ ಟಾಂಗ್‌ ನೀಡಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಮುಖಂಡರೇ ನೇರವಾಗಿ ನನಗೆ ಕರೆ ಮಾಡಿ ಆಫರ್‌ ನೀಡಿದ್ದರು. ಬಿಜೆಪಿ ಆಮಿಷವನ್ನು ರಾಜ್ಯ ಕಾಂಗ್ರೆಸ್‌ ನಾಯಕರ ಗಮನಕ್ಕೆ ತಂದಿದ್ದೇನೆ. ನಾನು ಅಧಿಕಾರಕ್ಕೆ ಆಸೆ ಪಡುವವಳು ಅಲ್ಲ, ಪಕ್ಷಕ್ಕೆ ನನ್ನ ನಿಷ್ಠೆ ಅಚಲ ಎಂದು ತಿಳಿಸಿದರು.

ಬಿಜೆಪಿ ನಾಯಕರ ಆಮಿಶಗಳ ಬಗ್ಗೆ ಈಗಾಗಲೇ ಅನೇಕ ಶಾಸಕರು ಹೇಳಿಕೊಂಡಿದ್ದಾರೆ. ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಅನೇಕ ತಂತ್ರ ಹೆಣೆದಿದ್ದರು. ಅದರಲ್ಲಿ ನನಗೂ ಆಮಿಷ ಒಡ್ಡಿದ್ದರು ಎಂದು ಹೇಳಿದರು. ಮಂತ್ರಿ ಸ್ಥಾನ ಹಾಗೂ 30 ಕೋಟಿ ರೂ. ಆಫ‌ರ್‌ ಆಮಿಷ ಒಡ್ಡಿದ ಬಿಜೆಪಿ ನಾಯಕರ ಹೆಸರು ಬಹಿರಂಗಪಡಿಸಲು ಅವರು ನಿರಾಕರಿಸಿದರು.

ಇದೇ ವೇಳೆ ಜಾರಕಿಹೊಳಿ ಸಹೋರರಿಗೂ ಟಾಂಗ್‌ ನೀಡಿದ ಹೆಬ್ಟಾಳ್ಕರ್‌, ನಾನು ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೆ. ಅದನ್ನು ಕೆಲವರು ಯಾವುದೋ ಹವಾದಲ್ಲಿ ಆಯ್ಕೆಯಾಗಿದ್ದೇನೆ ಎಂದು ವ್ಯಂಗ್ಯವಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನನ್ನ ಹವಾ ಏನು ಎಂಬುದನ್ನು ತೋರಿಸುತ್ತೇನೆ ಎಂದು ಸವಾಲಿನ ಧಾಟಿಯಲ್ಲಿ ಹೇಳಿದರು. ಈ ಮೂಲಕ ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮಿ ಹೆಬ್ಟಾಳ್ಕರ್‌ ನಡುವಿನ ಮುಸುಕಿನ ಗುದ್ದಾಟ ನಿಂತಿಲ್ಲ ಎಂಬುದು ಸಾಬೀತಾಗಿದೆ.

ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಟಾಳ್ಕರ್‌ ಬಿಜೆಪಿ ಹಣದ ಆಮಿಷ ಒಡ್ಡಿತ್ತು ಎಂದು ಹೇಳಿರುವುದು ನಿಜ. ಕಾಂಗ್ರೆಸ್‌ನ ಸಿ.ಎಸ್‌. ಶಿವಳ್ಳಿ, ಅನಿಲ್‌ ಚಿಕ್ಕಮಾದು ಅವರಿಗೂ ಆಮಿಷ ಒಡ್ಡಿದ್ದರು. ಬಿಜೆಪಿಯವರಿಗೆ ಅಧಿಕಾರದ ದಾಹ ನೆತ್ತಿಗೇರಿದೆ. ಬಿಜೆಪಿಯವರು ಏನು ಎನ್ನುವುದು ಜನರಿಗೆ ಗೊತ್ತಾಗಿದೆ
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

Comments are closed.