ಕರಾವಳಿ

‘ಸೇ ನೋ ಟು ಡ್ರಗ್ಸ್ ಅಭಿಯಾನ’: ಬೈಂದೂರು To ನಾವುಂದ ಸೈಕಲ್ ಜಾಥಾ

Pinterest LinkedIn Tumblr

ಕುಂದಾಪುರ: ಯುವಕರು ಬೆಲೆ ಬಾಳುವ ಮಾನವ ಸಂಪನ್ಮೂಲವಾಗಿದ್ದು ಅವರನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕಿದೆ. ಮಾದಕ ವ್ಯಸನಕ್ಕೆ ಬಲಿಯಾಗುವ ಯುವಜನಾಂಗಕ್ಕೆ ಮಾದಕ ವ್ಯಸನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ, ಪತ್ರಕರ್ತರ ಸಂಘದ ಒಗ್ಗೂಡುವಿಕೆಯಲ್ಲಿ ಸೇ ನೋ ಟು ಡ್ರಗ್ಸ್ ಹೆಸರಿನಲ್ಲಿ ಎರಡು ತಿಂಗಳಿನಿಂದ ವಿವಿಧ ಕಾರ್ಯಕ್ರಮಗಳ ಮೂಲಕ ಅಭಿಯಾನ ಮಾಡಿದೆ. ಪಾಠ ಚಟುವಟಿಕೆಗಳ ಬಗ್ಗೆ ಮಾತ್ರವೇ ಪೋಷಕರು ಗಮನ ಹರಿಸದೇ ವಿದ್ಯಾರ್ಥಿಗಳ ಚಲನವಲನದ ಬಗ್ಗೆಯೂ ಮಾಹಿತಿ ತಿಳಿಯಬೇಕು ಎಂದು ಉಡುಪಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಹೇಳಿದರು.

ಉಡುಪಿ ಜಿಲ್ಲಾ ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಉಡುಪಿ ಜಿಲ್ಲಾ ಪೊಲೀಸ್, ಉಡುಪಿ ಜಿಲ್ಲಾ ಕಾರ್‍ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಜಿಲ್ಲಾ ಪ್ರೆಸ್ ಕ್ಲಬ್, ಕುಂದಾಪುರ ಪೊಲೀಸ್ ಉಪವಿಭಾಗ, ಬೈಂದೂರು ವೃತ್ತ ಕಚೇರಿ, ಬೈಂದೂರು ಪೊಲೀಸ್ ಠಾಣೆ ಇವರ ಆಶ್ರಯದಲ್ಲಿ ಮಾದಕ ವ್ಯಸನ ವಿರೋಧಿ ಮಾಸಾಚರಣೆ ಅಭಿಯಾನದ ಅಂಗವಾಗಿ ಬೈಂದೂರಿನಿಂದ ನಾವುಂದದವರೆಗೆ ನಡೆದ ಸೈಕಲ್ ಜಾಥಾ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ನಮ್ಮ ರಾಜ್ಯದಲ್ಲಿಯೇ ಉಡುಪಿ ವಿದ್ಯೆ ಹಾಗೂ ಶುಚಿತ್ವದಲ್ಲಿ ಮೊದಲ ಸ್ಥಾನ ಪಡೆದಿದೆ. ಬುದ್ದಿವಂತರ ಜಿಲ್ಲೆಯಲ್ಲಿ ಮಾದಕ ವ್ಯಸನ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಒಗ್ಗೂಡಿ ಶ್ರಮವಹಿಸಬೇಕಿದೆ. ಮದಕ ವ್ಯಸನದ ಸಮಸ್ಯೆ ಕುರಿತು ಅರಿವು ನೀಡುವ ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದು ಅವರು ಹೇಳಿದರು.

ಕುಂದಾಪುರ ಡಿವೈ‌ಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಮಾತನಾಡಿ, ಅತೀ ಹೆಚ್ಚು ಯುವಜನರನ್ನು ಹೊಂದಿದ ದೇಶ ನಮ್ಮದಾಗಿದ್ದು ಒತ್ತಡದಲ್ಲಿರುವ ಯುವಜನಾಂಗ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಮಾದಕ ದ್ರವ್ಯಗಳ ಉಪಯೋಗ ತಡೆಯುವಲ್ಲಿ ಜನರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು. ದೇವಸ್ಥಾನ, ಚರ್ಚ್, ಮಸೀದಿಗಳಿಗೆ ತೆರಳಿ ಪೂಜೆ ಮಾಡುವ ಮೊದಲು ನಮ್ಮ ದೇಹವೆಂಬ ದೇಗುಲವನ್ನು ಸುಸ್ಥಿತಿಯಲ್ಲಿಡಬೇಕಿದೆ. ದುಡಿಮೆ, ದೇಹ ದಂಡನೆ ಮೂಲಕ ಇದು ಸಾಧ್ಯವಿದೆ. ನಮ್ಮ ದೇಶವನ್ನು ಒಡೆಯಲು ಯುವಜನಾಂಗವನ್ನು ಹಾಳುಗೈಯುವ ಹುನ್ನಾರವನ್ನು ಶತ್ರುಗಳು ಮಾಡುತ್ತಿದ್ದು ದೇಶವನ್ನು ಪ್ರೀತಿಸುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಮಾದಕ ವ್ಯಸನ ಮುಕ್ತವನ್ನಾಗಿಸಲು ಪಣ ತೊಡಬೇಕಿದೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜೊತೆ ಕಾರ್ಯದರ್ಶಿ ಮೈಕಲ್ ರಾಡಿಗ್ರಸ್ ‘ಸೇ ನೋ ಟು ಡ್ರಗ್ಸ್’ ಅಭಿಯಾನದ ಕುರಿತು ಮಾಹಿತಿ ನೀಡಿ ಮಾತನಾಡಿ, ಮಾದಕ ವ್ಯಸನಿಗಳನ್ನು ಮತ್ತು ಮಾರಾಟಗಾರರನ್ನು ಕಾನೂನು ವ್ಯಾಪ್ತಿಯಲ್ಲಿ ಬಂಧಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡುತ್ತದೆ. ಆದರೆ ಈ ವ್ಯಸನಕ್ಕೆ ಬಲಿಯಾದವರನ್ನು ಹೊರಬರುವಂತೆ ಮಾಡಲು ಜಾಗ್ರತಿ ಮೂಡಬೇಕಿದ್ದು ಇದಕ್ಕೆ ಪ್ರತಿಯೊಬ್ಬ ನಾಗರಿಕರು ಸಹಕಾರ ನೀಡಬೇಕು. ಎರಡು ತಿಂಗಳುಗಳ ಕಾಲ ನಡೆದ ಈ ಅಭಿಯಾನವು ಬಹುತೇಕ ಯಶಸ್ಸುಗೊಂಡಿದೆ. ಉಡುಪಿಯಲ್ಲಿ ಮಾದಕ ದ್ರವ್ಯ ವ್ಯಸನ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಸುಮಾರು ೫೩ ಪ್ರಕರಣಗಳು ದಾಖಲಾಗಿದೆ. ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಜಿಲ್ಲೆಯಲ್ಲಿ ಈ ಪಿಡುಗನ್ನು ನಿರ್ಮೂಲನೆ ಮಾಡಲು ಇಂತಹ ಅಭಿಯಾನ ಸದಾ ನಡೆಯಲಿದೆ ಎಂದರು.

ಈ ಸಂದರ್ಭ ಜಿಲ್ಲಾಪಂಚಾಯತ್ ಸದಸ್ಯ ಸುರೇಶ್ ಬಟವಾಡಿ, ಬೈಂದೂರು ಸಿಪಿ‌ಐ ಪರಮೇಶ್ವರ ಗುನಗ, ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜನಾರ್ಧನ ಮರವಂತೆ, ನಾವುಂದ ಸದ್ಗುರು ಹೋಟೇಲ್ ಮಾಲಿಕ ದೇವರಾಜ್ ಭಟ್, ನೂರಿ ಫಿಶ್ ನಾಗೂರು ಮಾಲಿಕ ಅಬ್ದುಲ್ ರೆಹಮಾನ್, ಬೈಂದೂರು ರೋಟರಿ ಕ್ಲಬ್ ನ ಐ. ನಾರಾಯಣ, ಕ್ರಷ್ಣಪ್ಪ ಶೆಟ್ಟಿ, ಉದ್ಯಮಿ ನಾಗರಾಜ ಗಾಣಿಗ, ಜೆಸಿರೆಟ್ ಅಧ್ಯಕ್ಷೆ ಪ್ರಿಯದರ್ಶಿನಿ ದೇವಾಡಿಗ, ನಾವುಂದ ಸಮ್ಮಿಲನ ಶಾಮಿಯಾನ ಮಾಲಿಕ ಕರುಣಾಕರ ಶೆಟ್ಟಿ, ಗಂಗೊಳ್ಳಿ ಪಿಎಸ್ಐ ವಾಸಪ್ಪ ನಾಯ್ಕ್, ಕೊಲ್ಲೂರು ಠಾಣೆ ಪಿಎಸ್ಐ ಶಿವಕುಮಾರ್ ಹಾಗೂ ವಿವಿಧ ಠಾಣೆ ಸಿಬ್ಬಂದಿಗಳು ಇದ್ದರು.

ಬೈಂದೂರು ಠಾಣಾ ಉಪನಿರೀಕ್ಷಕ ತಿಮ್ಮೇಶ್ ಕಾರ್ಯಕ್ರಮವನ್ನು ಸಂಯೋಜಿಸಿದ್ದು ಕಾರ್ಯಕ್ರಮ ನಿರೂಪಿಸಿದರು.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.