ಕರಾವಳಿ

ಕುಂದಾಪುರ(ಕೋಡಿ): ದೈತ್ಯ ಅಲೆಗಳ ರಭಸಕ್ಕೆ ಮನೆಯೆದುರೇ ವಿದ್ಯಾರ್ಥಿ ಸಮುದ್ರ ಪಾಲು

Pinterest LinkedIn Tumblr

ಕುಂದಾಪುರ: ಇಂದು ಭಾನುವಾರದ ರಜಾ ದಿನ. ಆತ ಸ್ಥಳೀಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ. ಮೀನುಗಾರಿಕೆ ನಡೆಯುತ್ತಿದ್ದ ನೋಡ ಹೋದ ಆತ ಸಮುದ್ರದಲೆಗಳ ರಭಸಕ್ಕೆ ಸಿಕ್ಕು ನಾಪತ್ತೆಯಾಗಿದ್ದು ಈ ಸಂಜೆಯ ತನಕವೂ ಹುಡುಕಾಟ ನಡೆಯುತ್ತಲೇ ಇದೆ.

ಭಾನುವಾರ ಮಧ್ಯಾಹ್ನದ ಸುಮಾರಿಗೆ ಕುಂದಾಪುರದ ಕೋಡಿ ಎಂಬಲ್ಲಿನ ಸಮುದ್ರದಲ್ಲಿ ಈ ದುರ್ಘಟನೆ ನಡೆದಿದ್ದು ಇಲ್ಲಿನ ನಿವಾಸಿ ಮನೋಜ ಪೂಜಾರಿ (18) ಸಮುದ್ರ ಪಾಲಾದ ದುರ್ದೈವಿ.

ನಿನ್ನೆಯಿಂದಲೂ ಅಲೆಗಳ ಅಬ್ಬರ ಜೋರಾಗಿತ್ತು. ಮನೋಜ್ ತನ್ನ ಸ್ನೇಹಿತರ ಜೊತೆ ಸಮುದ್ರ ತೀರದಲ್ಲಿರುವಾಗ ರಕ್ಕಸ ಅಲೆಯೊಂದು ಆತನನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ದಡದಲ್ಲಿದ್ದ ಇತರರು ನೋಡನೋಡುತ್ತಿದ್ದಂತೆಯೇ ಆತ ಕಡಲುಪಾಲಾಗಿ ಬಿಟ್ಟಿದ್ದ. ಒಂದಷ್ಟು ಮಂದಿ ಆತನ ರಕ್ಷಣೆಗೆ ಮುಂದಾದರೂ ಕೂಡ ಆ ದೈತ್ಯ ಅಲೆ ಆತನನ್ನು ತನ್ನ ಒಡಲಿಗೆ ಸೇರಿಸಿಕೊಂಡಿತ್ತು ಎನ್ನಲಾಗಿದೆ. ತಕ್ಷಣೆ ಹತ್ತಾರು ದೋಣಿಗಳ ಮೂಲಕ ಮನೋಜ್ ಹುಡುಕಾಟ ನಡೆಸಲಾಗಿತ್ತು. ಅದು ಅಸಾಧ್ಯವಾದಾಗ ಕೈರಂಪಣಿ ಬಲೆ ಬಳಸಿ ನೂರಕ್ಕೂ ಅಧಿಕ ಮೀನುಗಾರರು ತಮ್ಮ ಜೀವದ ಹಂಗು ತೊರೆದು ಕಡಲಿಗಿಳಿದು ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಸ್ಥಳದಲ್ಲಿ ಕುಂದಾಪುರ ಪೊಲೀಸರು, ಅಗ್ನಿಶಾಮಕದಳ ಬೀಡುಬಿಟ್ಟಿದೆ.

ನೂರಾರು ಮೀನುಗಾರರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರೂ ಕೂಡ ಸಮುದ್ರದಲ್ಲಿ ಕಡಲಬ್ಬರ ಜಾಸ್ಥಿಯಿರುವ ಹಿನ್ನೆಲೆ ಕಾರ್ಯಾಚರಣೆ ವಿಳಂಭವಾಗುತ್ತಿದೆ.

ಕುಂದಾಪುರ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.