ರಾಷ್ಟ್ರೀಯ

ಪೊಲೀಸರಿಂದ ಹತ್ಯೆಗೀಡಾದ ಆಪಲ್ ಉದ್ಯೋಗಿ ವಿವೇಕ್ ತಿವಾರಿ ಚಾರಿತ್ರ್ಯವಧೆಗೆ ಯತ್ನ: ಪತ್ನಿ ಕಲ್ಪನಾ ಆರೋಪ

Pinterest LinkedIn Tumblr


ಲಖನೌ: ಕಳೆದ ಶನಿವಾರ ಪೊಲೀಸರಿಂದ ಹತ್ಯೆಗೀಡಾದ ಆಪಲ್ ಉದ್ಯೋಗಿ ವಿವೇಕ್ ತಿವಾರಿ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.

ಹತ್ಯೆಯಲ್ಲಿ ಪೊಲೀಸರು ಶಾಮೀಲಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ತಿವಾರಿಯ ಕುರಿತು ಸಲ್ಲದ ಆರೋಪಗಳನ್ನು ಹೊರಿಸಿ, ಚಾರಿತ್ರ್ಯವಧೆಗೆ ಯತ್ನಿಸುತ್ತಿದ್ದಾರೆ ಎಂದು ಅವರ ಪತ್ನಿ ಕಲ್ಪನಾ ಆರೋಪಿಸಿದ್ದಾರೆ.

ಸನಾ ಖಾನ್ ಎಂಬ ಯುವತಿಯ ಜತೆಗೆ ವಿವೇಕ್ ಹೆಸರನ್ನು ಬಳಸಿಕೊಂಡು ಪೊಲೀಸರು ಪ್ರಕರಣದ ದಿಕ್ಕುತಪ್ಪಿಸಲು ಯತ್ನಿಸುತ್ತಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಸರಕಾರ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಕಲ್ಪನಾ ಕೇಳಿಕೊಂಡಿದ್ದಾರೆ.

ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ್ ಚೌಧರಿಯಿಂದ, ನನಗೆ, ಅತ್ತೆಗೆ ಮತ್ತು ಇಬ್ಬರು ಹೆಣ್ಣುಮಕ್ಕಳಿಗೆ ರಕ್ಷಣೆ ಒದಗಿಸಬೇಕು. ಹತ್ಯೆಯನ್ನು ಪೊಲೀಸರೇ ನಡೆಸಿರುವುದು ನನಗೆ ಗಾಬರಿ ಉಂಟುಮಾಡಿದೆ. ನಮ್ಮ ಮಕ್ಕಳ ರಕ್ಷಣೆ ಬಗ್ಗೆಯೂ ಚಿಂತೆಯುಂಟಾಗಿದೆ ಎಂದು ಕಲ್ಪನಾ ಹೇಳಿಕೊಂಡಿದ್ದಾರೆ.

ಕಲ್ಪನಾ ಭೇಟಿಯಾದ ಯೋಗಿ ಆದಿತ್ಯನಾಥ್
ವಿವೇಕ್ ಹತ್ಯೆ ಪ್ರಕರಣ ಜಟಿಲವಾಗುತ್ತಿದ್ದಂತೆಯೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೋಮವಾರ ಕಲ್ಪನಾ ಅವರನ್ನು ಭೇಟಿ ಮಾಡಿದ್ದಾರೆ. ಕಲ್ಪನಾ-ವಿವೇಕ್ ದಂಪತಿಯ ಇಬ್ಬರು ಹೆಣ್ಣುಮಕ್ಕಳ ಹೆಸರಿನಲ್ಲಿ ತಲಾ 5 ಲಕ್ಷ ರೂ. ಠೇವಣಿ, ಅತ್ತೆಯ ಹೆಸರಿನಲ್ಲಿ 5 ಲಕ್ಷ ರೂ. ಠೇವಣಿ ಮತ್ತು ಉದ್ಯೋಗ ಹಾಗು 25 ಲಕ್ಷ ರೂ. ಪರಿಹಾರ ನೀಡುವ ಭರವಸೆಯನ್ನು ಸಿಎಂ ನೀಡಿದ್ದಾರೆ ಎಂದು ಕಲ್ಪನಾ ತಿಳಿಸಿದ್ದಾರೆ.

ಕೇಜ್ರಿವಾಲ್‌ ವಿರುದ್ಧ ಎಫ್‌ಐಆರ್‌
ಉತ್ತರ ಪ್ರದೇಶದ ಆ್ಯಪಲ್‌ ಉದ್ಯೋಗಿ ಹತ್ಯೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ದಿಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಬಿಜೆಪಿ ನಾಯಕ ಹಾಗೂ ಸುಪ್ರೀಂ ಕೋರ್ಟ್‌ ವಕೀಲ ಅಶ್ವಿನಿ ಉಪಾಧ್ಯಾಯ ಅವರ ದೂರು ಆಧರಿಸಿ ಧರ್ಮದ ಹೆಸರಲ್ಲಿ ವೈಷಮ್ಯ ಬಿತ್ತುತ್ತಿರುವ ಮತ್ತು ಸಮಾಜದ ಸಾಮರಸ್ಯ ಕದಡುತ್ತಿರುವ ಆರೋಪದಡಿ ಲೋಕಮಾರ್ಗ ತಿಲಕ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್‌ 153ಎ, 295ಎ, 504, 505 ಮತ್ತು ಐಟಿ ಕಾಯಿದೆ ಕಲಂ 67ರ ಅಡಿಯಲ್ಲಿ ದೋಷಾರೋಪ ಹೊರಿಸಲಾಗಿದೆ.

ಕೇಜ್ರಿವಾಲ್‌ ಏನು ಹೇಳಿದ್ದರು?
ಕಾರು ನಿಲ್ಲಿಸಲಿಲ್ಲವೆಂಬ ಕಾರಣಕ್ಕೆ ಪೇದೆಯ ಗುಂಡೇಟಿಗೆ ಬಲಿಯಾದ ವಿವೇಕ್‌ ತಿವಾರಿ ತಿವಾರಿ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದ ಅರವಿಂದ್‌ ಕೇಜ್ರಿವಾಲ್‌, ”ಅಧಿಕಾರಕ್ಕಾಗಿ ಬಿಜೆಪಿ ನಾಯಕರು ಏನನ್ನು ಬೇಕಾದರೂ ಮಾಡುತ್ತಾರೆ. ವಿವೇಕ್‌ ತಿವಾರಿ ಹಿಂದೂ ಆಗಿದ್ದರೂ ಆತನನ್ನು ಹತ್ಯೆ ಮಾಡಲಾಯಿತು. ಹಿಂದೂಗಳನ್ನು ರಕ್ಷಿಸುತ್ತೇವೆ ಎಂದು ಹೇಳುವ ಬಿಜೆಪಿ, ವಿವೇಕ್‌ ತಿವಾರಿಯನ್ನೇಕೆ ಹತ್ಯೆ ಮಾಡಿದೆ? ಬಿಜೆಪಿ ಹಿಂದೂಗಳ ಹಿತಬಯಸುವ ಪಕ್ಷ ವಲ್ಲ. ಅಧಿಕಾರ ಹಿಡಿಯಲು ಹಿಂದೂಗಳನ್ನು ಹತ್ಯೆ ಮಾಡಲು ಸಹ ಬಿಜೆಪಿ ಹಿಂಜರಿಯುವುದಿಲ್ಲ,” ಎಂದು ಕೇಜ್ರಿವಾಲ್‌ ಟ್ವಿಟರ್‌ನಲ್ಲಿ ಆರೋಪಿಸಿದ್ದರು.

Comments are closed.