ರಾಷ್ಟ್ರೀಯ

ತಿರುಪತಿಯಲ್ಲಿ ಒಂದೇ ದಿನ ದಾಖಲೆಯ 5.13 ಲಕ್ಷ ಲಡ್ಡು ವಿತರಣೆ

Pinterest LinkedIn Tumblr


ತಿರುಪತಿ​: ತಿರುಪತಿ ಲಡ್ಡು ಯಾರಿಗೆ ತಾನೇ ಗೊತ್ತಿಲ್ಲ? ತಿರುಮಲ ದೇವಸ್ಥಾನದ ತಿರುಪತಿ ಲಡ್ಡು ರುಚಿ ಬೇರೆಲ್ಲೂ ಸಿಗಲು ಸಾಧ್ಯವೇ ಇಲ್ಲ. ಇದೀಗ ಅದೇ ತಿರುಪತಿ ದೇವಸ್ಥಾನ ಒಂದೇ ದಿನದಲ್ಲಿ 5.13 ಲಕ್ಷ ಲಡ್ಡುಗಳನ್ನು ವಿತರಣೆ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ.

ತಿರುಪತಿ ತಿಮ್ಮಪ್ಪನ ದೇವಾಲಯದ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಲಡ್ಡುಗಳನ್ನು ಪ್ರಸಾದವಾಗಿ ವಿತರಣೆ ಮಾಡಲಾಗಿದೆ. ಸಾಮಾನ್ಯವಾಗಿ ವಾರಾಂತ್ಯದಲ್ಲಿ ತಿರುಪತಿಗೆ ದೇವರ ದರ್ಶನಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ, ನಿನ್ನೆ ದಾಖಲೆಯ ಭಕ್ತರು ಆಗಮಿಸಿದ್ದು, ಒಂದೇ ದಿನ 5.13 ಲಕ್ಷ ಪ್ರಸಾದವನ್ನು ತಯಾರಿಸಿ ವಿತರಣೆ ಮಾಡಲಾಗಿದೆ.

ತಿರುಪತಿ ತಿರುಮಲ ದೇವಸ್ಥಾನದ ಅಡುಗೆಮನೆಯ ಅಂಕಿ-ಅಂಶದ ಪ್ರಕಾರ ನಿನ್ನೆ 5,13,566 ಲಡ್ಡುಗಳನ್ನು ತಯಾರಿಸಿ ವಿತರಿಸಲಾಗಿದೆ. ತಮಿಳರು ಪೊರಟಾಸಿ ಎಂದು ಕರೆಯಲ್ಪಡುವ ಈ ತಿಂಗಳನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದ ಈ ತಿಂಗಳು ದೇವಸ್ಥಾನಕ್ಕೆ ಭೇಟಿ ನೀಡಿದರೆ ಶುಭವಾಗುತ್ತದೆ ಎಂದು ತಮಿಳರು ಭಾವಿಸುತ್ತಾರೆ. ಹಾಗಾಗಿ, ನಿನ್ನೆ ಹೆಚ್ಚಿನ ಜನಸಂದಣಿ ಇತ್ತು. ಇದಕ್ಕಾಗಿ ಮುಂಚಿತವಾಗಿಯೇ ತಿರುಮಲ ದೇವಾಲಯದ ಆಡಳಿತ ಮಂಡಳಿ ಸಿದ್ಧತೆ ಮಾಡಿಕೊಂಡಿತ್ತು. ಈ ವೇಳೆ ಪ್ರತಿವರ್ಷ ಹೆಚ್ಚಿನ ಭಕ್ತರು ಆಗಮಿಸುವ ಕಾರಣ ಬೇಡಿಕೆಗೆ ಅನುಗುಣವಾಗಿ ಅಧಿಕ ಸಂಖ್ಯೆಯ ಲಡ್ಡುಗಳನ್ನು ತಯಾರಿಸಲಾಗಿತ್ತು.

2016ರಲ್ಲಿ ಅಕ್ಟೋಬರ್​ನಲ್ಲಿ 4,64,152 ಲಡ್ಡುಗಳನ್ನು ವಿತರಣೆ ಮಾಡಲಾಗಿತ್ತು. ಹಾಗೇ, ಈ ವರ್ಷ ಮೇ 28ರಂದು 4,32,745 ಲಡ್ಡು, ಮೇ 19ರಂದು 4,14,987 ಲಡ್ಡುಗಳ ವಿತರಣೆ ಮಾಡುವ ಮೂಲಕ ದಾಖಲೆ ನಿರ್ಮಿಸಲಾಗಿತ್ತು. ನಿನ್ನೆಯ ಭಕ್ತರ ಸಂಖ್ಯೆ ಆ ಎಲ್ಲ ದಾಖಲೆಗಳನ್ನೂ ಮೀರಿಸಿದೆ.

ತಿರುಪತಿ ಲಡ್ಡು ಜಗತ್ತಿನಾದ್ಯಂತ ರಫ್ತಾಗುತ್ತದೆ. ಕೇವಲ ಭಾರತದಷ್ಟೇ ಅಲ್ಲದೇ ದೇಶ ವಿದೇಶಗಳಲ್ಲಿ ತಿರುಪತಿ ಲಡ್ಡುವನ್ನು ಇಷ್ಟಪಡುವ ದೊಡ್ಡ ಸಮೂಹವೇ ಇದೆ. ಈ ಕಾರಣಕ್ಕಾಗಿಯೇ ತಿರುಪತಿ ಲಡ್ಡು ಅಂತಾರಾಷ್ಟ್ರೀಯ ಪೇಟೆಂಟ್​ ಕೂಡ ಪಡೆದುಕೊಂಡಿದೆ.

Comments are closed.