ನವದೆಹಲಿ: ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಗೃಹಬಂಧನಕ್ಕೆ ಒಳಪಡಿಸಿದ್ದ ಐವರು ಮಾನವಹಕ್ಕು ಹೋರಾಟಗಾರರ ಪೈಕಿ ಗೌತಮ್ ನವ್ಲಾಖ ಅವರನ್ನು ಬಿಡುಗಡೆಗೊಳಿಸಿ ದೆಹಲಿ ಹೈಕೋರ್ಟ್ ಇಂದು ಆದೇಶ ಹೊರಡಿಸಿದೆ.
ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಮಾನವ ಹಕ್ಕು ಹೋರಾಟಗಾರರ ಕೈವಾಡವಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಹೈದರಾಬಾದ್ನಲ್ಲಿ ತೆಲುಗು ಕವಿ ವರವರ ರಾವ್, ಫರೀದಾಬಾದ್ನಲ್ಲಿ ಸುಧಾ ಭಾರದ್ವಾಜ್, ಮುಂಬೈನಲ್ಲಿ ಅರುಣ್ ಫರೇರಾ ಮತ್ತು ವೆರ್ನನ್ ಗೋನ್ಸಾಲ್ವೆಸ್, ದೆಹಲಿಯಲ್ಲಿ ಗೌತಮ್ ನವ್ಲಾಖ ಅವರನ್ನು ಪೊಲೀಸರು ಬಂಧಿಸಿದ್ದರು. ಅವರನ್ನು ಗೃಹಬಂಧನದಲ್ಲಿಟ್ಟು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಆದೇಶ ನೀಡಿತ್ತು.
ಆಪಾದಿತರನ್ನು ಜೈಲಿನಲ್ಲಿ ಬಂಧಿಸದೆ, ಎಸ್ಐಟಿ ತನಿಖೆಗೂ ನೀಡದೆ ಪುಣೆ ಪೊಲೀಸರೇ ಗೃಹಬಂಧನದಲ್ಲಿಟ್ಟು ತನಿಖೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಆಪಾದಿತರ ವಿಚಾರಣೆಯನ್ನು ಪೂರ್ತಿಗೊಳಿಸಿರುವ ಕಾರಣ ಇಂದು ಮಾನವ ಹಕ್ಕು ಹೋರಾಟಗಾರ ಗೌತಮ್ ನವ್ಲಾಖ ಅವರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಲಾಗಿದೆ.
ಕಳೆದ ವಾರ ಸುಪ್ರೀಂಕೋರ್ಟ್ ಗೌತಮ್ ನವ್ಲಾಖ ಅವರಿಗೆ ನಾಲ್ಕು ವಾರಗಳ ಕಾಲಗಳೊಳಗೆ ತಾನು ನಿರಪರಾಧಿ ಎಂದು ಸಾಬೀತುಪಡಿಸಿಕೊಳ್ಳಲು ಅವಕಾಶ ನೀಡಿತ್ತು. ಅದರಂತೆ ಅಫಿಡವಿಟ್ ಸಲ್ಲಿಸಿರುವ ಗೌತಮ್ ಅವರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಲಾಗಿದೆ.
Comments are closed.