ಕರಾವಳಿ

ಸಂತ ಅಲೋಶಿಯಸ್ ಕಾಲೇಜಿನಲ್ಲಿ ಗಾಂಧೀ ಜಯಂತಿ : ರಾಷ್ಟ್ರ ಪಿತನಿಗೆ ಪ್ರೀತಿಯ ನಮನ

Pinterest LinkedIn Tumblr

ಮಂಗಳೂರು : ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ್ ಬೈಲ್ ಇಲ್ಲಿ ಇಂದು ಬೆಳಿಗ್ಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಮಧುರವಾದ ದೇವರ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮುಖ್ಯ ಅತಿಥಿಗಳಾಗಿ ನಗರ ಖ್ಯಾತ ಪತ್ರಿಕಾ ಛಾಯಗ್ರಾಹಕರು, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವರದಿಗಾರ (Reporter Cum Photo Journalist) ರವಿ ಪೊಸವನಿಕೆ ಉಪಸ್ಥಿತರಿದ್ದರು.

ಅವರು ತಮ್ಮ ಭಾಷಣದಲ್ಲಿ ಇಂದು ಜನ್ಮದಿನವನ್ನು ಆಚರಿಸುವ ರಾಷ್ಟ್ರದ ಮಹಾನ್ ನಾಯಕರಾಗಿರುವ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಯವರ ಜೀವನವನ್ನು ಸ್ಮರಿಸಿದರು. ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿಯ ಮಾರ್ಗ ಹಾಗೂ ಸ್ವಾತಂತ್ರ್ಯ ಪಡೆಯಲು ಅವರು ಪ್ರಾರಂಭಿಸಿದ ಚಳುವಳಿಗಳ ಬಗ್ಗೆ ಪರಿಚಯಿಸಿದರು.

ಕೋವಿಯಿಂದ ಸ್ವಾತಂತ್ರ್ಯ ಗಳಿಸಲು ಸಾಧ್ಯವಿಲ್ಲ ಅದು ಕೇವಲ ಅಹಿಂಸಾ ಮಾರ್ಗದಿಂದ ಮಾತ್ರ ಸಾಧ್ಯ ಎಂದು ಗಾಂಧೀಜಿಯವರು ತೋರಿಸಿಕೊಟ್ಟರು. ಅದೇ ಅಹಿಂಸಾ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿರುವ ವಂದನೀಯ ಫಾ| ರವಿ ಸಂತೋಷ್ ಕಾಮತ್ ರವರು ಗಾಂಧೀಜಿಯವರ ಗುಣಗಾಣ ಮಾಡಿದರು. ಈ ಸುಂದರ ಸಮಾರಂಭದಲ್ಲಿ ತಾವೂ ಭಾಗಿಯಾಗಿರುವುದಕ್ಕಾಗಿ ಸಂತೋಷ ವ್ಯಕ್ತ ಪಡಿಸಿದರು.

ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಫಿಲೋಮಿನಾ ಲೂವಿಸ್ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ರೇಖಾ ಫೆರ್ನಾಂಡಿಸ್ ಹಾಗೂ ಶಾಲಾ ನಾಯಕ , ಉಪನಾಯಕಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವರ್ಣರಂಜಿತ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.

ಗಾಂಧೀಜಿಯವರ ಸ್ವಚ್ಛ ಭಾರತದ ಸಂದೇಶವನ್ನು ಸಾರುವ ಕಿರು ನಾಟಕ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಈ ಸುಂದರ ಕಾರ್ಯಕ್ರಮವನ್ನು 2ನೇ ತರಗತಿ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ನೆರವೇರಿಸಿದರು.

ನಂತರ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮ ನೆರವೇರಿತು. ತಮ್ಮ ತರಗತಿ, ಶಾಲೆ, ಶಾಲಾ ವಠಾರವನ್ನು ಸ್ವಚ್ಛ ಗೊಳಿಸಿದರು. ನಂತರ ಎಲ್ಲಾ ವಿದ್ಯಾರ್ಥಿಗಳಿಗೂ ಸಿಹಿತಿಂಡಿಯನ್ನು ಹಂಚಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Comments are closed.