ರಾಷ್ಟ್ರೀಯ

ಮಹಿಳೆಯಿಂದ ಮಹಿಳೆಯ ಮೇಲೆ ಅತ್ಯಾಚಾರ: ಮೊಕದ್ದಮೆ ದಾಖಲಿಸಲು ಹಿಂದೇಟು ಹಾಕಿದ ಪೊಲೀಸರು

Pinterest LinkedIn Tumblr


ನವದೆಹಲಿ: ಸುಪ್ರೀಂ ಕೋರ್ಟ್​ ಸಲಿಂಗ ಸಂಬಂಧವನ್ನು ಕಾನೂನು ಬದ್ಧಗೊಳಿಸಿದ ಬೆನ್ನಲ್ಲೇ ಮಹಿಳೆಯಿಂದ ಮಹಿಳೆಯೊಬ್ಬರು ಲೈಂಗಿಕ ಕಿರುಕುಳಕ್ಕೊಳಗಾಗಿರುವ ದೂರು ಕೇಳಿ ಬಂದಿದೆ. 25 ವರ್ಷದ ಯುವತಿಯೊಬ್ಬರು ತನ್ನನ್ನು 19 ವರ್ಷದ ಯುವತಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಆದರೆ ಪೊಲೀಸರು ಈ ಮೊಕದ್ದಮೆ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.

ಶೋಷಣೆಗೆ ಒಳಗಾದ ಸಂತ್ರಸ್ತೆಯು ತನ್ನ ದೂರಿನಲ್ಲಿ 19 ವರ್ಷದ ಯುವತಿಯು ತನ್ನನ್ನು ನಿರಂತರವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಕೆಲಸದ ನಿಮಿತ್ತ ದೆಹಲಿಗೆ ಆಗಮಿಸಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದು, ಪುನರಾವರ್ತಿತ ಲೈಂಗಿಕ ಶೋಷಣೆ ಮತ್ತು ದೈಹಿಕ ಹಲ್ಲೆಯನ್ನೂ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ತಾನು ಈ ಮೊದಲೇ ಸೀಮಾಪುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದೆ, ಆದರೆ ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದರೆಂದೂ ಮಹಿಳೆ ಅರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಸೆಪ್ಟೆಂಬರ್ 26ರಂದು ಕಾರ್ಕರಮೂಮ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ದೂರುದಾರರ ಹೇಳಿಕೆಗೆ ಅನುಗುಣವಾಗಿ ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 164 ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಈ ಹಿಂದೆಯೂ ಗೆಳೆಯರಿಂದ ಅತ್ಯಾಚಾರ

ಇದಕ್ಕೂ ಮೊದಲು ಅಂದರೆ ಕಳೆದ ಮಾರ್ಚ್​ನಲ್ಲಿ ಗುರ್​ಗಾಂವ್​ನ ತನ್ನ ಉದ್ಯೋಗವನ್ನು ತೊರೆದು ಈ ಶೋಷಿತ ಮಹಿಳೆಯು ದೆಹಲಿಯಲ್ಲಿ ಸ್ವಂತಃ ಉದ್ಯಮ ಆರಂಭಿಸಿದ್ದರು. ಅಲ್ಲದೆ ತನ್ನ ವ್ಯಾಪಾರದಲ್ಲಿ ಪಾಲುದಾರರ ಹುಡುಕಾಟದಲ್ಲಿದ್ದಾಗ ರೋಹಿತ್ ಎನ್ನುವ ವ್ಯಕ್ತಿಯೊಬ್ಬರು ಪರಿಚಯವಾಗಿದ್ದಾರೆ. ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೋಹಿತ್ ಕೂಡ ಬಂಡವಾಳ ಹೂಡಲು ಆಸಕ್ತಿ ವಹಿಸಿದ್ದರು. ಹೀಗೆ ಪರಿಚಿತವಾದ ರೋಹಿತ್ ಮತ್ತವರ ಗೆಳೆಯ ರಾಹುಲ್ ತಾನು ವಾಸಿಸುತ್ತಿದ್ದ ದಿಲ್ಶಾದ್ ಕಾಲೊನಿಯ ಅಪಾರ್ಟ್ಮೆಂಟ್​ನಲ್ಲಿ ಅತ್ಯಾಚಾರ ನಡೆಸಿ ಅದರ ಅಶ್ಲೀಲ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು.

ಈ ವಿಡಿಯೋ ಮೂಲಕ ಬ್ಲಾಕ್​ಮೇಲ್ ಮಾಡಿ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡ ಅವರು ಅನಂತರ ಮತ್ತಷ್ಟು ಜನರೊಂದಿಗೆ ಮಲಗುವಂತೆ ಒತ್ತಾಯಿಸಿದ್ದರು. ಇದೇ ವೇಳೆ ಆರೋಪಿತ ಮಹಿಳೆ ಕೂಡ ಅಲ್ಲೇ ಇದ್ದು, ಅವರು ಕೂಡ ಸಂತ್ರ್ಸತೆಯೊಂದಿಗೆ ಕಾಮತೃಷೆ ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ನಿರಾಕರಿಸಿದಾಗ ತನ್ನ ಮೇಲೆ ಎಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆಂದು ಅತ್ಯಾಚಾರಕ್ಕೆ ಒಳಗಾದ ಮಹಿಳೆಯು ದೂರಿದ್ದಾರೆ. ಈ ಸಂಬಂಧ ಪೊಲೀಸರು ರಾಹುಲ್​ನ​ನ್ನು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಿದ್ದಾರೆ. ಇನ್ನೊಬ್ಬ ಪ್ರಮುಖ ಆರೋಪಿ ರೋಹಿತ್ ಹಾಗೂ ಇವರೊಂದಿಗಿದ್ದ ಸಾಗರ್ ತಲೆಮರೆಸಿಕೊಂಡಿದ್ದು ಇವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಇನ್ನು ಸಂತ್ರಸ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡ ಯುವತಿಯನ್ನು ಐಪಿಸಿಯ 376 ನೇ ವಿಭಾಗದಲ್ಲಿ ಶಿಕ್ಷೆಗೊಳಪಡಿಸುವುದು ಅಸಾಧ್ಯವಾಗಿದೆ. ಅತ್ಯಾಚಾರಕ್ಕಾಗಿ 376 ಸೆಕ್ಷನ್ ಅಡಿಯಲ್ಲಿ ಶಿಕ್ಷೆ ನೀಡಲಾಗುತ್ತದೆಯಾದರೂ, ಇದು ಮಹಿಳೆಯ-ಮಹಿಳೆಯ ಸಂಬಂಧವಾಗಿರುವುದರಿಂದ ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಹೇಮಂತ್ ಶರ್ಮಾ ನ್ಯೂಸ್ 18 ಗೆ ತಿಳಿಸಿದ್ದಾರೆ.

ಸಮ್ಮತಿ ಇಲ್ಲದೆ ಲೈಂಗಿಕ ಬಳಕೆಗೆ ಒಳಪಡಿಸಿರುವುದರಿಂದ 377 ಸೆಕ್ಷನ್ ಇಲ್ಲಿ ಅನ್ವಯವಾಗುವುದಿಲ್ಲ. ಪರಸ್ಪರ ಒಪ್ಪಿಗೆಯಿಂದ ಮಾತ್ರ 377 ಸೆಕ್ಷನ್ ಕಾನೂನು ಬದ್ಧವಾಗಿದ್ದು, ಇಲ್ಲಿ ನನ್ನ ಕಕ್ಷಿದಾರರು ನಿಸ್ಸಂದೇಹವಾಗಿ ಒತ್ತಾಯದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ಹೀಗಾಗಿ ಆರೋಪಿ ಯುವತಿಯ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಸಂತ್ರಸ್ತ ಯುವತಿಯ ವಕೀಲೆ ಪ್ರಿಯಾಂಕಾ ದಾಗರ್ ತಿಳಿಸಿದ್ದಾರೆ.

Comments are closed.