ರಾಷ್ಟ್ರೀಯ

ಶಬರಿಮಲೆಗೆ ಮಹಿಳೆಯರ ಪ್ರವೇಶ: ತೀರ್ಪು ಮರುಪರಿಶೀಲನೆ ಅರ್ಜಿ ಇಲ್ಲ

Pinterest LinkedIn Tumblr


ತಿರುವನಂತಪುರಂ: ಶಬರಿಮಲೆ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶಾವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಮರುಪರಿಶೀಲನೆಗೆ ಅರ್ಜಿ ಸಲ್ಲಿಸುವ ಆಲೋಚನೆ ಇಲ್ಲ ಎಂದು ಕೇರಳ ಸರಕಾರ ಬುಧವಾರ ಸ್ಪಷ್ಟಪಡಿಸಿದೆ.

”ದೇಗುಲದ ಆಡಳಿತವನ್ನು ನಿರ್ವಹಿಸುವ ಟ್ರಾವಂಕೂರ್‌ ದೇವಸ್ವಂ ಮಂಡಳಿ (ಟಿಡಿಬಿ) ಸಹ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸುಪ್ರೀಂ ಕೋರ್ಟ್‌ ಆದೇಶವನ್ನು ಪಾಲಿಸುವುದು ಸರಕಾರದ ಕರ್ತವ್ಯವಾಗಿದ್ದು, ಯಾವುದೇ ರಾಜಿಯಿಲ್ಲದೆ ಅದರ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು,” ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.

ಟಿಡಿಬಿ ಅಧ್ಯಕ್ಷರು, ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಕೆ ಸಾಧ್ಯತೆ ಬಗ್ಗೆ ಪರಿಶೀಲಿಸುವುದಾಗಿ ಈ ಮುನ್ನ ಹೇಳಿದ್ದರು.

ಈ ಮಧ್ಯೆ, ದೇಗುಲದ ಸಂಪ್ರದಾಯ ಮತ್ತು ನಂಬಿಕೆಗಳನ್ನು ಕಾಪಾಡಲು ಮೇಲ್ಮನವಿ ಸಲ್ಲಿಸಬೇಕೆಂದು ಕಾಂಗ್ರೆಸ್‌ ಮತ್ತು ಬಿಜೆಪಿ ಸರಕಾರಕ್ಕೆ ಒತ್ತಾಯಿಸಿದ್ದವು.

ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರವೇಶಿಸಲು ಅನುಮತಿ ಇರಲಿಲ್ಲ. ಈ ವಯಸ್ಸಿನ ಹೆಣ್ಣುಮಕ್ಕಳು ಋುತುಮತಿಯಾಗುವ ಕಾರಣಕ್ಕೆ ಅವರು ದೇವಾಲಯಕ್ಕೆ ಕಾಲಿಡುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆ ಬರುತ್ತದೆ ಎಂದು ಪ್ರವೇಶ ನಿಷೇಧಿಸಲಾಗಿತ್ತು. ಈ ಸಂಪ್ರದಾಯವನ್ನು ಕಳೆದ 800 ವರ್ಷಗಳಿಂದ ದೇವಾಲಯದ ಆಡಳಿತ ಮಂಡಳಿ ಪಾಲಿಸಿಕೊಂಡು ಬಂದಿತ್ತು.

ಸುಪ್ರೀಂ ಕೋರ್ಟ್‌ ಸೆ.28 ರಂದು ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿ ಐತಿಹಾಸಿಕ ತೀರ್ಪು ನೀಡಿತ್ತು.

Comments are closed.