ಕರಾವಳಿ

ಮೂತ್ರಪಿಂಡಗಳಿಗೆ ಹಾನಿನ್ನುಂಟುಮಾಡಬಹುದಾದ….ಕೆಲವು ಚಟಗಳು

Pinterest LinkedIn Tumblr

ನಮ್ಮ ಶರೀರವು ಆರೋಗ್ಯಯುತವಾಗಿರುವಲ್ಲಿ ಮೂತ್ರಪಿಂಡಗಳು ಮಹತ್ವದ ಪಾತ್ರವನ್ನು ಹೊಂದಿವೆ ಎನ್ನುವುದು ಎಲ್ಲರಿಗೂ ಗೊತ್ತು. ಅವರೆ ಬೀಜದ ಆಕಾರದಲ್ಲಿರುವ ಮೂತ್ರಪಿಂಡಗಳು ಪ್ರತಿದಿನ ಸರಾಸರಿ 120ರಿಂದ 150 ಲೀ.ಗಳಷ್ಟು ಮೂತ್ರ, ತ್ಯಾಜ್ಯ ಮತ್ತು ಹೆಚ್ಚುವರಿ ದ್ರವಗಳನ್ನು ಸೋಸುವ ಕಾರ್ಯ ಮಾಡುತ್ತವೆ. ನಮ್ಮ ಶರೀರದಲ್ಲಿ ತ್ಯಾಜ್ಯಗಳು ಸಂಗ್ರಹವಾಗದಂತೆಯೂ ಅದು ರಕ್ಷಣೆಯನ್ನು ನೀಡುತ್ತದೆ. ಎಲೆಕ್ಟ್ರೋಲೈಟ್ಗಳ ಮಟ್ಟವನ್ನು ನಿಯಂತ್ರಿಸುವುದು, ಮೂಳೆಗಳ ಆರೋಗ್ಯಕ್ಕೆ ಅಗತ್ಯವಾದ ಹಾರ್ಮೋನ್ಗಳ ಉತ್ಪಾದನೆ, ರಕ್ತಕೋಶಗಳ ಉತ್ಪತ್ತಿ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿ ಅವು ಪ್ರಮುಖ ಪಾತ್ರ ವಹಿಸುತ್ತವೆ.

ಸಾಮಾನ್ಯವಾಗಿ ಮೂತ್ರಪಿಂಡಗಳಿಗೆ ಹಾನಿಯಾಗಿರುವ ಬಗ್ಗೆ ಯಾವುದೇ ಎಚ್ಚರಿಕೆಯ ಲಕ್ಷಣ ನಮ್ಮ ಗಮನಕ್ಕೆ ಬರುವುದಿಲ್ಲ, ಹೀಗಾಗಿ ಮೂತ್ರಪಿಂಡಗಳ ಆರೋಗ್ಯವನ್ನು ಕಾಯ್ದುಕೊಳ್ಳುವುದು ಹೇಗೆ ಎನ್ನುವುದು ನಮಗೆ ಗೊತ್ತಿರಬೇಕಾಗುತ್ತದೆ. ನಮಗಿರುವ ಹಲವಾರು ಚಟಗಳು ಕಾಲಕ್ರಮೇಣ ನಮ್ಮ ಮೂತ್ರಪಿಂಡಗಳಿಗೆ ಹಾನಿಯನ್ನುಂಟು ಮಾಡುತ್ತವೆ ಮತ್ತು ಈ ಅಂಗಗಳ ಮೇಲೆ ಹೆಚ್ಚಿನ ಒತ್ತಡ ಬೀಳಲು ಕಾರಣವಾಗುತ್ತವೆ.
ಅಂತಹ ಕೆಲವು ಚಟಗಳು ಇಲ್ಲಿವೆ….

ಅತಿಯಾದ ಮದ್ಯಪಾನ
ಅತಿಯಾದ ಮದ್ಯಪಾನ ಚಟವು ಮೂತ್ರಪಿಂಡಗಳು ಮತ್ತು ಯಕೃತ್ತಿನ ಮೇಲೆ ಹೆಚ್ಚಿನ ಒತ್ತಡಕ್ಕೆ ಕಾರಣವಾಗುತ್ತವೆ ಮತ್ತು ಅವುಗಳಿಗೆ ಹಾನಿಯಾಗುವ ಅಪಾಯವನ್ನು ಹೆಚ್ಚಿಸುತ್ತವೆ.

ಮೂತ್ರವನ್ನು ತಡೆಯುವುದು
ಮೂತ್ರ ವಿಸರ್ಜನೆಯನ್ನು ತುಂಬ ಹೊತ್ತಿನವರೆಗೆ ತಡೆ ಹಿಡಿಯುವುದರಿಂದ ಒತ್ತಡವುಂಟಾಗಿ ಮೂತ್ರಪಿಂಡ ವೈಫಲ್ಯ ಮತ್ತು ಮೂತ್ರಪಿಂಡ ಕಲ್ಲುಗಳಿಗೆ ಕಾರಣವಾಗುತ್ತದೆ.

ಸಾಕಷ್ಟು ನೀರು ಸೇವಿಸದಿರುವುದು
ಸಾಕಷ್ಟು ನೀರು ಕುಡಿಯದಿದ್ದರೆ ಹೊರಹೋಗಬೇಕಾದ ತ್ಯಾಜ್ಯಗಳು ಮತ್ತು ನಂಜಿನ ಅಂಶಗಳು ಶರೀರದಲ್ಲಿಯೇ ಸಂಗ್ರಹಗೊಳ್ಳುತ್ತವೆ ಮತ್ತು ಇದು ಮೂತ್ರಪಿಂಡಗಳಿಗೆ ಗಂಭೀರ ಹಾನಿಯನ್ನುಂಟು ಮಾಡಬಹುದು.

ಅತಿಯಾದ ಸಕ್ಕರೆ ಸೇವನೆ
ಪ್ರತಿ ದಿನ ಎರಡು ಗ್ಲಾಸ್ಗಳಿಗಿಂತ ಹೆಚ್ಚು ಸಿಹಿ ಪಾನೀಯ ಸೇವಿಸುವವರ ಮೂತ್ರದಲ್ಲಿ ಪ್ರೋಟಿನ್ ಸೇರಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದ್ದು, ಮೂತ್ರಪಿಂಡಗಳು ಸಮರ್ಪಕವಾಗಿ ಕಾರ್ಯ ನಿರ್ವಹಸುತ್ತಿಲ್ಲ ಎನ್ನುವುದಕ್ಕೆ ಇದು ಆರಂಭದ ಲಕ್ಷಣವಾಗಿದೆ.

ಅತಿಯಾದ ಉಪ್ಪಿನ ಬಳಕೆ
ಶರೀರದಲ್ಲಿ ಅಧಿಕ ಸೋಡಿಯಂ ಮಟ್ಟವು ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಹೆಚ್ಚಿಸುವ ಜೊತೆಗೆ ರಕ್ತದೊತ್ತಡವನ್ನು ಏರಿಸುತ್ತದೆ ಮತ್ತು ಮೂತ್ರಪಿಂಡಗಳಿಗೆ ಹಾನಿಯನ್ನುಂಟು ಮಾಡಬಲ್ಲುದು.

ನಿದ್ರಾಹೀನತೆ
ತೀವ್ರ ನಿದ್ರಾಹೀನತೆಯೂ ಮೂತ್ರಪಿಂಡಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಮೂತ್ರಪಿಂಡಗಳು ಆರೋಗ್ಯಯುತವಾಗಿರಲು ರಾತ್ರಿ ಸಾಕಷ್ಟು ನಿದ್ರೆಯು ಅಗತ್ಯವಾಗಿದೆ.

ವಿಟಾಮಿನ್ ಮತ್ತು ಖನಿಜಾಂಶಗಳ ಕೊರತೆ
ಮೂತ್ರಪಿಂಡಗಳ ಕಾರ್ಯ ನಿರ್ವಹಣೆಯು ಹೆಚ್ಚಾಗಿ ನಾವು ಸೇವಿಸುವ ಆಹಾರವನ್ನು ಅವಲಂಬಿಸಿರುತ್ತದೆ. ನಮ್ಮ ಶರೀರದಲ್ಲಿ ಬಿ6ನಂತಹ ವಿಟಾಮಿನ್ಗಳು ಮತ್ತು ಮ್ಯಾಗ್ನೀಷಿಯಮ್ನಂತಹ ಖನಿಜಗಳ ಕೊರತೆಯುಂಟಾದರೆ ಶರೀರವು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಮತ್ತು ಇದರ ಪರಿಣಾಮ ಮೂತ್ರಪಿಂಡಗಳ ಮೇಲೆ ಆಗುತ್ತದೆ.

ಅತಿಯಾದ ಕಾಫಿ ಸೇವನೆ
ಕೆಫೀನ್ ಮೂತ್ರಪಿಂ ಡಗಳ ಮೇಲೆ ಒತ್ತಡಕ್ಕೆ ಮತ್ತು ರಕ್ತದೊತ್ತಡ ಏರಿಕೆಗೆ ಕಾರಣವಾಗುತ್ತದೆ. ಅತಿಯಾದ ಕೆಫೀನ್ ಶರೀರದಲ್ಲಿ ಸೇರುತ್ತಿದ್ದರೆ ಅದು ಕಾಲಕ್ರಮೇಣ ಮೂತ್ರಪಿಂಡಗಳಿಗೆ ಹಾನಿಯನ್ನುಂಟು ಮಾಡಬಲ್ಲುದು.

ನೋವು ನಿವಾರಕಗಳ ದುರುಪಯೋಗ
ಕೆಲವು ನೋವು ನಿವಾರಕಗಳು ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗಬಲ್ಲ ಅಪಾಯಕಾರಿ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ. ಹೆಚ್ಚಿನವರು ಸಣ್ಣಪುಟ್ಟ ತಲೆ ನೋವು,ಮೈಕೈ ನೋವಿಗೂ ಮಾತ್ರೆಗಳನ್ನು ಸೇವಿಸುತ್ತಿರುತ್ತಾರೆ. ಮೂತ್ರಪಿಂಡಗಳು ಮತ್ತು ಯಕೃತ್ತಿಗೆ ತೀವ್ರ ಹಾನಿ ಇಂತಹ ನೋವು ನಿವಾರಕಗಳ ಅಡ್ಡ ಪರಿಣಾಮಗಳಲ್ಲೊಂದಾಗಿದೆ.

ಅತಿಯಾದ ಪ್ರಾಣಿಜನ್ಯ ಪ್ರೋಟಿನ್ ಸೇವನೆ
ಕೆಂಪುಮಾಂಸದಂತಹ ಪ್ರಾಣಿಜನ್ಯ ಪ್ರೋಟಿನ್ಗಳ ಹೆಚ್ಚಿನ ಬಳಕೆಯು ಮೂತ್ರಪಿಂಡ ಗಳ ಮೇಲೆ ಚಯಾಪಚಯ ಒತ್ತಡವನ್ನು ಹೆಚ್ಚಿಸುತ್ತದೆ. ಹೀಗಾಗಿ ಕೆಂಪುಮಾಂಸದ ಸೇವನೆಯಿಂದ ದೂರವಿರಿ ಎನ್ನುವುದು ತಜ್ಞರ ಶಿಫಾರಸಾಗಿದೆ.

Comments are closed.