ದುಬೈ: ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿರುವ ಪ್ರಧಾನಿ ಮೋದಿ ವಿರುದ್ಧ ಯುಎಇ ಉದ್ಯಮಿ ಡಾ.ಬಿ.ಆರ್.ಶೆಟ್ಟಿಯವರು ಮಾಡಿರುವ ಆರೋಪದ ಸತ್ಯಾಂಶ ಹೊರಬಿದ್ದಿದ್ದು, ‘ ಮೋದಿಯ ಜನಪ್ರಿಯತೆ, ಜನಪರ ಕಾರ್ಯಗಳನ್ನು ಸಹಿಸಲಾಗದವರು ನನ್ನ ಹೆಸರಿನ ಮೂಲಕ ಪ್ರಧಾನಿ ಮೋದಿಯ ತೇಜೋವಧೆ ಮಾಡಲು ಮುಂದಾಗಿರವುದಕ್ಕೆ ಡಾ.ಬಿ.ಆರ್.ಶೆಟ್ಟಿ ಅವರೇ ಈ ಕೃತ್ಯವನ್ನು ಖಂಡಿಸಿದ್ದಾರೆ.
‘ಕನ್ನಡಿಗ ವರ್ಲ್ಡ್’ನೊಂದಿಗೆ ಮಾತನಾಡಿದ ಡಾ.ಬಿ.ಆರ್.ಶೆಟ್ಟಿ, ತಾನು ಪ್ರಧಾನಿ ಮೋದಿಯವರ ಕಟ್ಟಾ ಅಭಿಮಾನಿ, ಅವರಿಗಾಗಿ ತನು, ಮನ, ಧನವನ್ನು ಅರ್ಪಿಸಲು ಸದಾ ಸಿದ್ಧನಾಗಿದ್ದೇನೆ. ಅಂತಹ ಮಹಾನ್ ವ್ಯಕ್ತಿಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ, ಅದಕ್ಕೆ ನನ್ನ ಹೆಸರನ್ನು ಸೇರಿಸಿರುವುದು ಖಂಡನಾರ್ಹ ಎಂದಿದ್ದಾರೆ.
ವೈರಲ್ ಆಗುತ್ತಿರುವ ಪೋಸ್ಟ್
ಪ್ರಧಾನಿ ವಿರುದ್ಧದ ಕುಕೃತ್ಯಕ್ಕೆ ತನ್ನ ಹೆಸರು ಬಳಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಡಾ.ಬಿ.ಆರ್.ಶೆಟ್ಟಿ, ಈ ರೀತಿ ಪ್ರಧಾನಿ ಬಗ್ಗೆ ಅಪಪ್ರಚಾರ ಮಾಡಿದರೆ ಅವರ ಜನಪ್ರಿಯತೆ, ಅಭಿಮಾನಕ್ಕೆ ಒಂದಿಂಚು ಕುಂದುಂಟಾಗಲ್ಲ ಎಂದಿದ್ದಾರೆ.
ಭಾರತ ಕಂಡ ಅತ್ಯಂತ ಪ್ರಭಾವಿ ಪ್ರಧಾನಿಯಾಗಿರುವ ಮೋದಿ ಅವರಿಂದ ಇಂದು ಭಾರತ ವಿಶ್ವದಲ್ಲಿಯೇ ಪ್ರಮುಖ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿದೆ. ಮೋದಿಯವರು ದೇಶದ ಜನರಿಗೆ ಮೋಸ ಮಾಡಿಲ್ಲ. ಮೋಸ ಮಾಡಲು ಅವಕಾಶನು ನೀಡಿಲ್ಲ. ವಿದೇಶಗಳಲ್ಲಿ ಈ ಹಿಂದೆಗಿಂತಲೂ ನಾವೆಲ್ಲಾ ಹೆಮ್ಮೆಯಿಂದ ಭಾರತೀಯರೆನಿಸಿಕೊಳ್ಳುವಂಥ ಮಟ್ಟಕ್ಕೆ ದೇಶವನ್ನು ಮುನ್ನಡೆಸುತ್ತಿದ್ದಾರೆ. ವಿದೇಶಗಳಲ್ಲಿ ನಾವೆಲ್ಲಾ ತಲೆ ಎತ್ತಿ ನಡೆಯುವಂತೆ ದೇಶವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. 2019ರಲ್ಲಿ ನಡೆಯುವ ಚುನಾವಣೆಯಲ್ಲಿ ಮೋದಿ ಮತ್ತೆ ಗೆದ್ದು ಬಂದು ದೇಶದ ಚುಕ್ಕಾಣಿ ಹಿಡಿಯುವುದು ಶತಸಿದ್ಧ. ಅದಕ್ಕಾಗಿ ದೇಶದ ಜನರೊಂದಿಗೆ ನಾನು ಕೂಡ ಕೈಜೋಡಿಸಲಿದ್ದೇನೆ ಎಂದು ಡಾ.ಬಿ.ಆರ್.ಶೆಟ್ಟಿ ಪ್ರಧಾನಿ ಪರ ಬ್ಯಾಟಿಂಗ್ ಮಾಡಿದ್ದಾರೆ.
Comments are closed.