ರಾಷ್ಟ್ರೀಯ

ದಿಲ್ಲಿಯಲ್ಲಿ ರಾಜಕೀಯ ಚರ್ಚೆ; ರಾಜ್ಯ ಸಂಪುಟ ವಿಸ್ತರಣೆ ಬಿಕ್ಕಟ್ಟಿಗೆ ಪರಿಹಾರ?

Pinterest LinkedIn Tumblr


ನವದೆಹಲಿ: ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉದ್ಭವಿಸಿರುವ ಸಚಿವ ಸಂಪುಟ ವಿಸ್ತರಣೆ ಬಿಕ್ಕಟ್ಟನ್ನು ಬಗೆಹರಿಸುವ ಪ್ರಯತ್ನಗಳು ಸಾಗಿವೆ. ಈಗಾಗಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ದೆಹಲಿಯ ಕರ್ನಾಟಕ ಭವನದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಒಂದೂವರೆ ಗಂಟೆ ಚರ್ಚೆ ನಡೆಸಿದ್ದಾರೆ. ಇದಲ್ಲದೆ ದೆಹಲಿಗೆ ಆಗಮಿಸಿರುವ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಕೂಡ ಸಂಪುಟ ವಿಸ್ತರಣೆ ಸಂಬಂಧ ಕಾಂಗ್ರೆಸ್ ನಾಯಕರ ಜತೆ ಚರ್ಚಿಸುವ ಸಾಧ್ಯತೆ ಇದೆ.

ಸಂಪುಟದಲ್ಲಿ ಖಾಲಿ ಇರುವ 7 ಸ್ಥಾನಗಳನ್ನು ಭರ್ತಿ ಮಾಡುವುದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ತಲೆನೋವಿನ ಕೆಲಸವಾಗಿದೆ. ಅದರಲ್ಲೂ ಕಾಂಗ್ರೆಸ್ ಪಾಲಿನ ಆರು ಸ್ಥಾನಗಳಿಗೆ 15ಕ್ಕೂ ಹೆಚ್ಚು ಶಾಸಕರು ಪೈಪೋಟಿಯಲ್ಲಿದ್ದು, ಯಾರಿಗೆ ಸಚಿವ ಸ್ಥಾನ ಕೊಡಬೇಕೆಂಬುದು ಕಗ್ಗಂಟಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ದೆಹಲಿಯ ಕರ್ನಾಟಕ ಭವನದಲ್ಲಿ ಉಳಿದಿದ್ದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.

ಮೈತ್ರಿ ಸರ್ಕಾರ ಸುಗಮವಾಗಿ ಸಾಗಬೇಕಾದರೆ ಸಂಪುಟ ವಿಸ್ತರಣೆ ಮಾಡುವುದು ಅಗತ್ಯ ಎಂದು ವೇಣುಗೋಪಾಲ್ ಅವರಿಗೆ ದೇವೇಗೌಡರು ತಿಳಿಸಿದ್ದಾರೆ ಎನ್ನಲಾಗಿದೆ. ಜಾತಿವಾರು, ಪ್ರದೇಶವಾರು ಸಚಿವ ಸ್ಥಾನ ನೀಡಬೇಕು. ಸಂಪುಟ ವಿಸ್ತರಣೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸರ್ಕಾರಕ್ಕೆ ಪೂರಕ ವಾತಾವರಣ ನಿರ್ಮಿಸಬೇಕು ಎಂಬ ಹಿನ್ನೆಲೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.

ದೇವೇಗೌಡರ ಭೇಟಿ ಬಳಿಕ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಮೈತ್ರಿ ಸರ್ಕಾರದ ಅನೇಕ ವಿಷಯಗಳನ್ನು ಚರ್ಚೆ ಮಾಡಿದ್ದೇವೆ. ಮೈತ್ರಿಯನ್ನು ಗಟ್ಟಿಗೊಳಿಸುವ ಬಗ್ಗೆ ಚರ್ಚಿಸಿದ್ದೇವೆ ಎಂದಿದ್ದಾರೆ.

ಬಳಿಕ ಮಾತನಾಡಿದ ದೇವೇಗೌಡರು, ವೇಣುಗೋಪಾಲ್ ಜತೆ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕಗಳ ಬಗ್ಗೆ ಚರ್ಚಿಸಿದ್ದೇನೆ.‌ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ಅಭಿಪ್ರಾಯಕ್ಕೆ ಆದ್ಯತೆ ನೀಡಿ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆ ಬಾರದಿರಲು ಸಚಿವ ಸಂಪುಟ ವಿಸ್ತರಣೆಗೆ ಆಗಲೇಬೇಕು ಎಂಬ ಅಭಿಪ್ರಾಯವನ್ನು ಹೇಳಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.‌‌ ಇದಕ್ಕಾಗಿ ಈಗಾಗಲೇ ಕುಮಾರಸ್ವಾಮಿ ದೆಹಲಿಗೆ ಆಗಮಿಸಿದ್ದು, ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತುಕತೆ ನಡೆಸಲು ತೀರ್ಮಾನಿಸಿದ್ದಾರೆ. ಇದರ ಬಗ್ಗೆ ಕುಮಾರಸ್ವಾಮಿ ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ಕೂಡ ಚರ್ಚೆ ನಡೆಸಿದ್ದಾರೆ. ದೇವೇಗೌಡರು ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಎಚ್ಡಿಕೆ ನಿನ್ನೆ ರಾತ್ರಿಯೇ ದೆಹಲಿಗೆ ಆಗಮಿಸಿದ್ದಾರೆ.

Comments are closed.