ರಾಷ್ಟ್ರೀಯ

ಜಲಪ್ರಳಯ: ಕೇರಳ, ತಮಿಳುನಾಡಿನಲ್ಲಿ ರೆಡ್​ ಅಲರ್ಟ್ ಘೋಷಣೆ ​

Pinterest LinkedIn Tumblr


ಚೆನ್ನೈ: ಕೇರಳ, ತಮಿಳುನಾಡು, ಪುದುಚೇರಿ ರಾಜ್ಯಗಳಲ್ಲಿ ಅ. 7ರಂದು ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆ ಭಾಗಗಳಲ್ಲಿ ರೆಡ್​ ಅಲರ್ಟ್​ ಘೋಷಿಸಿದೆ.

ಎರಡು ತಿಂಗಳ ಹಿಂದೆ ಕೇರಳ ಅತ್ಯಂತ ಭೀಕರವಾದ ಪ್ರವಾಹಕ್ಕೆ ಸಿಕ್ಕಿ ನಲುಗಿಹೋಗಿತ್ತು. ಅಲ್ಲಿಯ ಜನರು ಇನ್ನೂ ಆ ಆಘಾತದಿಂದ ಚೇತರಿಸಿಕೊಂಡಿಲ್ಲ. ಆಸ್ತಿ, ಮನೆ, ಕುಟುಂಬಕ್ಕೆ ಆಧಾರವಾಗಿದ್ದ ಕೆಲ ಜೀವಗಳನ್ನೂ ಕಳೆದುಕೊಂಡ ‘ದೇವರನಾಡಿನ’ ಜನರಿಗೆ ವಿಶ್ವಾದ್ಯಂತ ಹಲವಾರು ಜನ ಸಹಾಯಹಸ್ತ ಚಾಚಿದ್ದರು. ಆದರೆ, ಅದೇ ಕೇರಳಕ್ಕೀಗ ಮತ್ತೊಮ್ಮೆ ಮಳೆಯ ಹೊಡೆತದ ಅಪಾಯ ಎದುರಾಗಿದೆ.

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ಈ ಭಾನುವಾರ ತಮಿಳುನಾಡು, ಕೇರಳದಲ್ಲಿ ಭಾರೀ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತ ರಾಜ್ಯಗಳಲ್ಲೂ ಮಳೆಯಾಗುವ ಸಾಧ್ಯತೆಯಿದೆ. ತಮಿಳುನಾಡು, ಕೇರಳ ಸೇರಿದಂತೆ ಕರ್ನಾಟಕದ ಕರಾವಳಿ ಭಾಗದಲ್ಲಿ ಮೀನುಗಾರರಿಗೆ ಶನಿವಾರದಿಂದ ಸೋಮವಾರದವರೆಗೆ ಸಮುದ್ರದ ಕಡೆಗೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.

ಇತ್ತೀಚೆಗೆ ಕೇರಳದಲ್ಲಿ ಸಂಭವಿಸಿದ ಪ್ರವಾಹದಿಂದ ಆಸ್ತಿ-ಪಾಸ್ತಿ ಹಾನಿಯಾಗಿ 25 ಸಾವಿರ ಕೋಟಿಗೂ ಹೆಚ್ಚು ನಷ್ಟವುಂಟಾಗಿತ್ತು. ಅದರಿಂದ ಚೇತರಿಸಿಕೊಳ್ಳುವ ಮುನ್ನವೇ ಮತ್ತೆ ಭಾರೀ ಮಳೆಯಾಗುವ ಸಂಭಾವ್ಯತೆಯನ್ನು ಹವಾಮಾನ ಇಲಾಖೆ ತಿಳಿಸಿದೆ. ಈ ಬಗ್ಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಕೂಡ ಟ್ವೀಟ್ ಮಾಡಿದ್ದು, ಅ. 7ರಂದು 24 ಗಂಟೆಗಳಲ್ಲಿ 12ರಿಂದ 20 ಸೆ. ಮೀ. ಮಳೆಯಾಗುವ ಸಾಧ್ಯತೆಯಿದೆ. ಕೇರಳದ ಒಂದೆರಡು ಜಿಲ್ಲೆಗಳಲ್ಲಿ ಈ ರೀತಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಾವು ಅದಕ್ಕೆ ಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಕೇರಳದ ಇಡುಕ್ಕಿ, ಪಲಕ್ಕಾಡ್, ತ್ರಿಶೂರ್​ ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಘೋಷಿಸಲಾಗಿದೆ ಎಂದು ಹೇಳಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಎದ್ದಿರುವುದರಿಂದ ದಕ್ಷಿಣ ಭಾರತದ ರಾಜ್ಯಗಳ ಮೇಲೂ ಅದರ ಪರಿಣಾಮವಾಗುತ್ತಿದೆ. ಈ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಜಿಲ್ಲಾಡಳಿತದ ಕಚೇರಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಿಗೆ ಹೋಗದಂತೆ, ಆದಷ್ಟು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಜನರಿಗೆ ಸೂಚನೆ ನೀಡಲಾಗಿದೆ. ಮೀನುಗಾರರಿಗೂ ಸಮುದ್ರದಲ್ಲಿ ಹೋಗದಂತೆ ಎಚ್ಚರಿಕೆ ನೀಡಿದ್ದೇವೆ ಎಂದು ತಮಿಳುನಾಡು ಆಯುಕ್ತ ಕೆ. ಸತ್ಯಗೋಪಾಲ್​ ತಿಳಿಸಿದ್ದಾರೆ.

Comments are closed.