ಕರಾವಳಿ

ಕುಂದಾಪುರದಲ್ಲೊಂದು ವಿಸ್ಮಯ; ಕರುವಿನ ಬಾಯಿಯೊಳಗೆ ಇನ್ನೊಂದು ತಲೆ!

Pinterest LinkedIn Tumblr

ಕುಂದಾಪುರ: ಪ್ರಾಣಿಗಳಿಗೆ ಒಂದೇ ಮುಖವಿರುತ್ತದೆ. ಆದರೆ ಪ್ರಕೃತಿ ವಿಸ್ಮಯವೆಂಬಂತೆ ಇಲ್ಲೊಂದು ಹಸು ಎರಡು ತಲೆಗಳಿರುವ ಹೆಣ್ಣು ಕರುವಿಗೆ ಜನ್ಮ ನೀಡಿದೆ.

ಕುಂದಾಪುರ ತಾಲೂಕಿನ ಕಂದಾವರದ ಮನೆಯೊಂದರಲ್ಲಿ ಇಂತಹ ಒಂದು ಅಪರೂಪದ ಕರು ಜನಿಸಿದ್ದು, ಇದೀಗ ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿದೆ. ಪಶುವೈದ್ಯಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ ಈ ಪ್ರಕರಣದಲ್ಲಿ ಕರುವಿನ ಇನ್ನೊಂದು ತಲೆಯನ್ನು ಹೆಮ್ಮಾಡಿಯ ಪಶುವೈದ್ಯಾಧಿಕಾರಿ ಡಾ. ವಾಗೇಶ್ ಹಾಗೂ ಹುಣ್ಸೆಮಕ್ಕಿ ಪಶುವೈದ್ಯಾಧಿಕಾರಿ ಡಾ. ಜಯಣ್ಣ ಯಶಸ್ವಿಯಾಗಿ ಸರ್ಜರಿ ನಡೆಸಿ ಬೇರ್ಪಡಿಸಿದ್ದಾರೆ.

ಕಂದಾವರ ನಾರ್ಕಳಿ ಮನೆ ನಿವಾಸಿ ವಿಠಲ ಶೆಟ್ಟಿ ಎಂಬವರಿಗೆ ಸೇರಿದ ಹಸು ವಿಚಿತ್ರ ರೀತಿಯಲ್ಲಿರುವ ಕರುವೊಂದನ್ನು ಹಾಕಿದೆ. ಸಾಮಾನ್ಯ ಕರುವಿನಂತೆ ನಾಲ್ಕು ಕಾಲುಗಳಿರುವ ಈ ಕರುವಿಗೆ ಎರಡು ತಲೆ, ಒಂದು ಬಾಯಿ, ಒಂದು ನಾಲಗೆ ಜೊತೆಗೆ ಮೂರು ಕಣ್ಣುಗಳು. ಮುಕ್ಕಣ್ಣ ಕರುವಿಗೆ ಎಡ ಮತ್ತು ಬಲದಲ್ಲಿ ಎರಡು ಕಣ್ಣುಗಳಿದ್ದರೆ ಇನ್ನೊಂದು ಮುಖದಲ್ಲಿ ಒಂದು ಕಣ್ಣು ಮೂಡಿಬಂದಿದೆ. ಅದೃಷ್ಟಾವಶಾತ್ ಹಸು ಹಾಗೂ ಕರು ಎರಡೂ ಆರೋಗ್ಯವಾಗಿದೆ.

ಕರುವಿಗೆ ಎರಡು ಮುಖಗಳಿರುವುದರಿಂದ ಅತೀ ಭಾರವಾಗಿದ್ದು, ಮುಖವೆತ್ತಲು ಸಾಧ್ಯವಾಗುತ್ತಿರಲಿಲ್ಲ. ಕರುವಿನ ನಾಲಗೆ ತಾಗಿಕೊಂಡು ಎರಡುವರೆ ಕೆಜಿಯಷ್ಟು ಭಾರದ ಇನ್ನೊಂದು ತಲೆ ಸೇರಿಕೊಂಡಿದ್ದರಿಂದ ಯಾವುದೇ ಆಹಾರ ಸೇವಿಸಲಾಗುತ್ತಿರಲಿಲ್ಲ. ಕರುವಿನ ದಾರುಣ ಸ್ಥಿತಿ ನೋಡಿ ಮನೆಯವರು ಹೆಮ್ಮಾಡಿಯ ಪಶು ವೈದ್ಯಾಧಿಕಾರಿ ವಾಗೇಶ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದು, ವೈದ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಯಶಸ್ವಿ ಸರ್ಜರಿ ನಡೆಸಿ ತಲೆ ಬೇರ್ಪಡಿಸಿದ್ದು, ಇದೀಗ ಕರು ಯಾವುದೇ ಅಪಾಯವವಿಲ್ಲದೆ ಸಹಜ ಸ್ಥಿತಿಯಲ್ಲಿದೆ.

ಹಸುವಿನ ಗರ್ಭದಲ್ಲಿ ಎರಡು ಭ್ರೂಣಗಳು ಬೆಳವಣಿಗೆ ಹೊಂದುವ ಸಮಯದಲ್ಲಿ ಕ್ರೋಮೋಜೋಮ್‌ಗಳು ಏರುಪೇರಾಗಿ ಒಂದು ದೇಹ ಎರಡು ತಲೆ ಅದು ಕೂಡ ಇನ್ನೊಂದು ತಲೆಗೆ ಹೊಂದಿಕೊಂಡೇ ಜನಿಸುವ ಸಾಧ್ಯಗಳಿವೆ ಎನ್ನುತ್ತಾರೆ ಪಶುವೈದ್ಯಾಧಿಕಾರಿ ಡಾ. ವಾಗೇಶ್ ಚವಾಣ್.

ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ಸರ್ಜರಿ ನಡೆಸಿದ ವೈದ್ಯಾಧಿಕಾರಿಗಳು ಕೊನೆಗೂ ಕರುವಿನ ಬಾಯಿಯೊಳಗಿರುವ ಇನ್ನೊಂದು ತಲೆಯನ್ನು ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ. ಪಶುವೈದ್ಯಾಧಿಕಾರಿಗಳ ಈ ಕಾರ್ಯಕ್ಕೆ ಮನೆಯವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Comments are closed.