ರಾಷ್ಟ್ರೀಯ

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ತೀರ್ಪುಳ ಮೇಲ್ಮನವಿಗೆ ಆಗ್ರಹಿಸಿ ಕಾಂಗ್ರೆಸ್‌ನಿಂದಲೂ ಧರಣಿ

Pinterest LinkedIn Tumblr


ತಿರುವನಂತಪುರಂ: ಶಬರಿಮಲೆ ದೇಗುಲಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಒತ್ತಾಯಿಸಿ ಕಾಂಗ್ರೆಸ್‌ ಸಹ ಶುಕ್ರವಾರ ಧರಣಿ ಆರಂಭಿಸಿದೆ.

ಮೇಲ್ಮನವಿ ಸಲ್ಲಿಸದ ಎಲ್‌ಡಿಎಫ್‌ ಸರಕಾರದ ಕ್ರಮ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್‌ ಸಹ ಹೋರಾಟಕ್ಕೆ ಇಳಿದಿದೆ. ಪಥನಂತಿಟ್ಟದಲ್ಲಿ ಶುಕ್ರವಾರ ನಡೆದ ಧರಣಿಯಲ್ಲಿ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ರಮೇಶ್‌ ಚೆನ್ನಿತಾಲ, ಆರ್‌ಎಸ್‌ಎಸ್‌, ಬಿಜೆಪಿ ಮತ್ತು ಕೇರಳ ಸರಕಾರ ಹಿಂದೂಗಳನ್ನು ವಂಚಿಸುತ್ತಿವೆ. ಪವಿತ್ರವಾದ ಶಬರಿಮಲೆಯನ್ನು ಹೋರಾಟ ವಲಯವನ್ನಾಗಿ ಪರಿವರ್ತಿಸಬಾರದು. ಸುಪ್ರೀಂ ಕೋರ್ಟ್‌ನ ತೀರ್ಪನ್ನು ಅನುಷ್ಠಾನಕ್ಕೆ ತರಲು ಎಲ್‌ಡಿಎಫ್‌ ಸರಕಾರ ಆತುರದ ಕ್ರಮಗಳನ್ನು ಕೈಗೊಂಡಿದೆ. ಜಾರಿಗೊಳಿಸಬೇಕಾದ ಇನ್ನೂ ಅನೇಕ ನ್ಯಾಯಾಲಯದ ತೀರ್ಪುಗಳು ಬಾಕಿ ಇವೆ. ಅದರ ಬಗ್ಗೆ ಗಮನಹರಿಸಬೇಕು ಎಂದು ವ್ಯಂಗ್ಯವಾಡಿದರು.

ಮತ್ತೊಂದೆಡೆ ಸಿಪಿಐ ಎ(ಎಂ) ರಾಜ್ಯ ಕಾರ್ಯದರ್ಶಿ ಕೊಡಿಯಾರಿ ಬಾಲಕೃಷ್ಣನ್‌ ಇಚ್ಛೆ ಇರುವವರು ದೇಗುಲಕ್ಕೆ ಭೇಟಿ ನೀಡಬಹುದು. ಈ ತೀರ್ಪು ಮಹಿಳೆಯರನ್ನು ದ್ವಿತೀಯ ದರ್ಜೆ ಪ್ರಜೆಗಳಂತೆ ನಡೆಸಿಕೊಳ್ಳುವ ವರ್ತನೆಗೆ ಕೊನೆ ಹಾಡಲಿದೆ. ಆಶ್ಚರ್ಯಪಡುವ ಬದಲು ತೀರ್ಪು ಅನುಷ್ಠಾನಗೊಳಿಸುವ ಅಗತ್ಯವಿದೆ ತಮ್ಮ ಪಕ್ಷದ ಮುಖವಾಣಿ ‘ದೇಶಾಭಿಮಾನಿ’ಯಲ್ಲಿ ಬರೆದುಕೊಂಡಿದ್ದಾರೆ.

ಮಹಿಳಾ ಪೊಲೀಸರ ನಿಯೋಜನೆ
ಸುಪ್ರೀಂ ಕೋರ್ಟ್‌ ತೀರ್ಪು ಜಾರಿಗೊಳಿಸುವ ಭಾಗವಾಗಿ ಶಬರಿಮಲೆಯಲ್ಲಿ ಮಹಿಳಾ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಕೇರಳ ಡಿಜಿಪಿ ಲೋಕನಾಥ್‌ ಬಹೇರಾ ಹೇಳಿದ್ದಾರೆ. ಕಾನೂನು ಪಾಲನೆ ಪೊಲೀಸರ ಕರ್ತವ್ಯ. ಯಾವುದೇ ಧರ್ಮ, ಲಿಂಗ ಅಥವಾ ಇನ್ನಾವುದೇ ತಾರತಮ್ಯವಿಲ್ಲದೆ ಎಲ್ಲರೂ ಕರ್ತವ್ಯ ನಿಭಾಯಿಸಬೇಕು ಎಂದು ಬಹೇರಾ ಹೇಳಿದ್ದಾರೆ. ಶಬರಿಮಲೆಯಲ್ಲಿ ಸುಮಾರು 600 ಮಹಿಳಾ ಪೇದೆಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

Comments are closed.