ಕರ್ನಾಟಕ

5 ರಾಜ್ಯಗಳ ಚುನಾವಣೆ ಘೋಷಣೆ ಬೆನ್ನಲ್ಲೇ ರಾಜ್ಯದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ಘೋಷಣೆ

Pinterest LinkedIn Tumblr


ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಐದು ರಾಜ್ಯಗಳ ಚುನಾವಣೆಯನ್ನು ಎರಡು ಹಂತಗಳಲ್ಲಿ ನಡೆಸುವ ನಿರ್ಧಾರವನ್ನು ಘೋಷಿಸಿದ ಜತೆಯಲ್ಲೇ ಕರ್ನಾಟಕದ ಉಪ ಚುನಾವಣೆಗಳಿಗೂ ದಿನಾಂಕ ನಿಗದಿ ಮಾಡಿದೆ. ನವೆಂಬರ್​ 3ರಂದು ಮೂರು ಲೋಕಸಭಾ ಕ್ಷೇತ್ರಗಳಿಗೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಸಿದ್ದು ನ್ಯಾಮಗೌಡ ಅವರ ಅಕಾಲಿಕ ಮರಣದಿಂದ ತೆರವಾದ ಜಮಖಂಡಿ ಕ್ಷೇತ್ರ, ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ರಾಮನಗರ ಕ್ಷೇತ್ರ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ತೆರವಾದ ಶಿವಮೊಗ್ಗ, ಶ್ರೀರಾಮುಲು ಅವರ ಬಳ್ಳಾರಿ ಮತ್ತು ಸಿ.ಎಸ್​. ಪುಟ್ಟರಾಜು ಅವರಿಂದ ತೆರವಾದ ಮಂಡ್ಯ ಲೋಕಸಭೆಗಳಿಗೆ ಚುನಾವಣೆ ನಡೆಯಲಿದೆ.

ರಾಮನಗರದಲ್ಲಿ ಜೆಡಿಎಸ್​ ಮತ್ತು ಕಾಂಗ್ರೆಸ್​ ಜಂಟಿ ಅಭ್ಯರ್ಥಿಯನ್ನು ನಿಲ್ಲಿಸುವುದು ಬಹುತೇಕ ಖಚಿತವಾಗಿದ್ದು, ಅನಿತಾ ಕುಮಾರಸ್ವಾಮಿ ಸ್ಪರ್ದಿಸುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿಯಿಂದ ಜಿಲ್ಲಾಧ್ಯಕ್ಷ ರುದ್ರೇಶ್​ ಅವರು ಕಣಕ್ಕಿಳಿಯಲಿದ್ದಾರೆ. ಈ ಹಿಂದೆಲ್ಲಾ ತ್ರಿಕೋನ ಸ್ಪರ್ದೆ ಇರುತ್ತಿದ್ದ ಕ್ಷೇತ್ರದಲ್ಲೀಗ ಬಿಜೆಪಿ ವಿರುದ್ಧ ಕಾಂಗ್ರೆಸ್​ – ಜೆಡಿಎಸ್​ ಸಂಘಟಿತ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದೆ. ಕುಮಾರಸ್ವಾಮಿಯವರ ಭದ್ರ ನೆಲೆಯಾದ ರಾಮನಗರದಲ್ಲಿ ಜೆಡಿಎಸ್​ ಅಭ್ಯರ್ಥಿಯೇ ನೆಚ್ಚಿನ ಅಭ್ಯರ್ಥಿಯಾಗಿರಲಿದ್ದಾರೆ.

ಸಿದ್ದು ನ್ಯಾಮಗೌಡ ಮಗ ಆನಂದ್​ ನ್ಯಾಮಗೌಡ ಅವರಿಗೆ ಜಮಖಂಡಿ ಕ್ಷೇತ್ರದಿಂದ ಟಿಕೆಟ್​ ನೀಡುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್​ ಪ್ರಾಬಲ್ಯ ಹೊಂದಿರುವ ಕ್ಷೇತ್ರ ಮತ್ತು ಜನಮೆಚ್ಚಿನ ನಾಯಕ ನ್ಯಾಮಗೌಡರ ನಿಧನದಿಂದ ಈ ಕ್ಷೇತ್ರದಲ್ಲೂ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳೇ ಮೇಲ್ನೋಟಕ್ಕೆ ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ಬಿಎಸ್​ವೈ ತವರಲ್ಲಿ ಚುನಾವಣಾ ಕಣ ಹೇಗಿದೆ:

ಬಿ.ಎಸ್​. ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾದ ಶಿವಮೊಗ್ಗ ಕ್ಷೇತ್ರದಿಂದ ಮಗ, ಮಾಜಿ ಸಂಸದ ಬಿ.ವೈ. ರಾಘವೇಂದ್ರ ಅವರೇ ಅಭ್ಯರ್ಥಿ ಎಂಬುದಾಗಿ ಘೋಷಿಸಲಾಗಿದೆ. ಈ ಹಿಂದೆಯೂ ಅನಾಯಾಸವಾದ ಗೆಲುವು ಕಂಡಿರುವ ಬಿ.ವೈ. ರಾಘವೇಂದ್ರ ಅವರಿಗೆ ಗೆಲುವು ಕಷ್ಟದ ಮಾತೇನಲ್ಲ ಎಂಬ ಮಾತುಗಳು ಕ್ಷೇತ್ರದಲ್ಲಿ ಸಾಮಾನ್ಯವಾಗಿ ಕೇಳಿ ಬರುತ್ತದೆ. ಆದರೆ ಈ ಬಾರಿ ಜೆಡಿಎಸ್ ಮತ್ತು ಕಾಂಗ್ರೆಸ್​ ಎರಡೂ ಪಕ್ಷಗಳು ಒಗ್ಗಟ್ಟಾಗುವುದರಿಂದ ಬಿಜೆಪಿಗೆ ಕೊಂಚ ಮಟ್ಟಿನ ಸಮಸ್ಯೆಯಾಗಬಹುದು ಎಂದೂ ಹೇಳಲಾಗುತ್ತಿದೆ.

ಕಾಂಗ್ರೆಸ್​ನಿಂದ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್​ ಟಿಕೆಟ್​ಗಾಗಿ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ ಎನ್ನಲಾಗುತ್ತಿದೆ. ಕಾಂಗೋಡು ತಿಮ್ಮಪ್ಪ ಮತ್ತು ಕಿಮ್ಮನೆ ರತ್ನಾಕರ್​ ಇಬ್ಬರೂ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಈ ಕಾರಣದಿಂದ ಕಾಂಗ್ರೆಸ್​ ಈ ಇಬ್ಬರು ಹಿರಿಯ ನಾಯಕರನ್ನು ಪರಿಗಣಿಸಲಿದೆಯಾ ಎಂಬುದೇ ಮೊದಲ ಪ್ರಶ್ನೆಯಾಗಿದೆ. ಜತೆಗೆ ಕಾಗೋಡು ತಿಮ್ಮಪ್ಪ ಈ ಬಾರಿ ಚುನಾವಣೆಗೆ ನಿಂತರೆ ಇದೇ ಕಡೆಯ ಚುನಾವಣೆಯಾಗಬಹುದು ಎಂದೂ ಹೇಳಲಾಗುತ್ತಿದೆ.

ಒಂದು ವೇಳೆ ತಿಮ್ಮಪ್ಪ ಸೋತರೆ, ಎದುರಿಸಿದ ಕಡೆಯ ಎರಡು ಚುನಾವಣೆಯಲ್ಲೂ ಸೋಲುಂಡ ಖಿನ್ನತೆ ಕಾಡಬಹುದು. ಈ ಕಾರಣಕ್ಕಾಗಿ ಕಾಗೋಡು ಟಿಕೆಟ್​ಗಾಗಿ ಮುಂದೆ ಬರದಿರುವ ಸಾಧ್ಯತೆಯೂ ಇದೆ. ಜೆಡಿಎಸ್​ನಿಂದಲೂ ಪ್ರಬಲ ಎದುರಾಳಿ ಶಿವಮೊಗ್ಗ ಜಿಲ್ಲೆಯಲ್ಲಿ ಇಲ್ಲದಿದ್ದರೂ ಎರಡೂ ಪಕ್ಷಗಳ ಮತಗಳನ್ನು ಕ್ರೋಢೀಕರಿಸುವ ಪ್ರಯತ್ನವನ್ನಂತೂ ಕಾಣಬಹುದು.

ಗಣಿ ಧೂಳಲ್ಲಿ ಯಾರ ಅಬ್ಬರ?:

ಬಳ್ಳಾರಿಯಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳು ತಮ್ಮದೇ ಆದ ಹಿಡಿತವನ್ನು ಹೊಂದಿದೆ. ಬಿಜೆಪಿಯಿಂದ ಸಣ್ಣ ಫಕೀರಪ್ಪ ನಿಲ್ಲುವ ಸಾಧ್ಯತೆ ದಟ್ಟವಾಗಿದೆ. ಇತ್ತ ಕಾಂಗ್ರೆಸ್​ನಿಂದ ಶಾಸಕ ನಾಗೇಂದ್ರ ಅವರ ಅಣ್ಣ ಎಂ.ಎಲ್​. ಪ್ರಸಾದ್​ ಸ್ಪರ್ದಿಸುವ ಸಾಧ್ಯತೆಯಿದೆ.

ಮಾಜಿ ಸಚಿವ, ಅಕ್ರಮ ಗಣಿ ಪ್ರಕರಣಗಳ ಆರೋಪಿ ಗಾಲಿ ಜನಾರ್ಧನ್​ ರೆಡ್ಡಿ ಅವರ ಹೆಸರು ಇಂದಿಗೂ ಬಳ್ಳಾರಿಯಲ್ಲಿ ಚಾಲ್ತಿಯಲ್ಲಿದೆ. ಜತೆಗೆ ಶ್ರೀರಾಮುಲು ಅವರ ವರ್ಚಸ್ಸು ಕೂಡ ಬಿಜೆಪಿಗೆ ಸಹಕಾರಿಯಾಗುವ ಸಾಧ್ಯತೆಯಿದೆ. ಇತ್ತ ರೆಡ್ಡಿ ಬಣದಲ್ಲೇ ಇದ್ದ ನಾಗೇಂದ್ರ ಕೂಡ ಪ್ರಭಾವಿಯಾಗಿದ್ದಾರೆ. ನಾಗೇಂದ್ರ ಅಣ್ಣ ಸ್ಪರ್ದಿಸಿದರೆ ಗೆಲ್ಲಿಸಲು ಎಲ್ಲ ರೀತಿಯ ಪ್ರಯತ್ನವನ್ನೂ ನಾಗೇಂದ್ರ ಅವರಿಂದ ನಿರೀಕ್ಷಿಸಬಹುದು.

ಮಂಡ್ಯಾದಲ್ಲಿ ಯಾರಿಗೂ ಬೇಡ ಚುನಾವಣೆ:

ಕೆಲವೇ ಕೆಲವು ತಿಂಗಳುಗಳ ಕಾಲ ಅಧಿಕಾರ ಹಿಡಿಯುವುದು ಮಂಡ್ಯ ಜಿಲ್ಲೆಯಲ್ಲಿ ಯಾವ ಪಕ್ಷಕ್ಕೂ ಬೇಕಾಗಿಲ್ಲ ಎಂಬ ಸ್ಥಿತಿಯಿದೆ. ಮುಂಬರುವ 2019ರ ಲೋಕಸಭಾ ಚುನಾವಣೆಯ ವರೆಗೆ ಮಾತ್ರ ಸಂಸದರಾಗಿ ಇರಲು ಯಾರೂ ಮನಸ್ಸು ಮಾಡುತ್ತಿಲ್ಲ ಎನ್ನುತ್ತವೆ ಮೂಲಗಳು. ಈ ಕಾರಣಕ್ಕಾಗಿಯೇ ಟಿಕೆಟ್​ಗಾಗಿ ಹಪಹಪಿ ಬಿಟ್ಟು ಯಾರು ಬೇಕಾದರೂ ನಿಲ್ಲಿ ಎಂಬ ರೀತಿಯಲ್ಲಿ ಎಲ್ಲಾ ಪಕ್ಷಗಳ ಮುಖಂಡರು ಸುಮ್ಮನಿದ್ದಾರೆ ಎನ್ನಲಾಗುತ್ತಿದೆ.

ಮಾಜಿ ಪ್ರಧಾನಿ ದೇವೇ ಗೌಡರ ಕುಟುಂಬದಿಂದ ಯಾರನ್ನಾದರೂ ನಿಲ್ಲಿಸುವ ಸಾಧ್ಯತೆಯೂ ಇದೆ. ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಹಾಸನದಿಂದ ಎಚ್​.ಡಿ. ರೇವಣ್ಣ ಮಗ ಪ್ರಜ್ವಲ್​ಗೆ ಟಿಕೆಟ್​ ನೀಡುವುದಾಗಿ ಸ್ವತಃ ದೇವೇ ಗೌಡರೇ ಹೇಳಿದ್ದಾರೆ. ಮಂಡ್ಯ ಜಿಲ್ಲೆಯಿಂದ ಕುಮಾರಸ್ವಾಮಿ ಮಗ ನಿಖಿಲ್​ ಕುಮಾರಸ್ವಾಮಿಯವರನ್ನು ನಿಲ್ಲಿಸುವ ಬಗ್ಗೆಯೂ ಚಿಂತನೆಯಿದೆ ಎಂದು ಪಕ್ಷದ ಮೂಲಗಳು ತಿಳಿಸುತ್ತವೆ. ಆದರೆ ಕೆಲವೇ ತಿಂಗಳುಗಳ ಅವಧಿಗೆ ಸಂಸದರಾಗುವ ಇಚ್ಛೆ ಯಾರಲ್ಲೂ ಕಾಣುತ್ತಿಲ್ಲ.

ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಂತೂ ಸತ್ಯ. ಯಾರನ್ನೇ ನಿಲ್ಲಿಸಿದರೂ ಸಂಘಟಿತ ಹೋರಾಟದಿಂದ ಗೆಲುವು ದಕ್ಕುವ ಸಾಧ್ಯತೆಯಿದೆ. ಇದೇ ನವೆಂಬರ್​ 3 ರಂದು ಮತದಾನ ನಡೆಯಲಿದ್ದು, ನವೆಂಬರ್​ 11ರಂದು ಫಲಿತಾಂಶ ಹೊರಬೀಳಲಿದೆ.

Comments are closed.