ರಾಷ್ಟ್ರೀಯ

ಈ ಸರಕಾರಿ ಶಾಲೆಯಲ್ಲಿ ‘ಭಾರತ್ ಮಾತಾ ಕಿ ಜೈ’ ಎಂದರೆ ಶಿಕ್ಷೆ

Pinterest LinkedIn Tumblr


ಬಲಿಯಾ: ‘ ಭಾರತ್ ಮಾತಾ ಕಿ ಜೈ’ ಘೋಷಣೆಯ ಮೇಲೆ ಎದ್ದಿರುವ ವಿವಾದ ತಣ್ಣಗಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಇದಕ್ಕೊಂದು ತಾಜಾ ನಿದರ್ಶನ ಉತ್ತರ ಪ್ರದೇಶದ ಸರಕಾರಿ ಶಾಲೆಯೊಂದರ ನಿಯಮ. ಬಲಿಯಾದ ಸರಕಾರಿ ಶಾಲೆಯೊಂದರಲ್ಲಿ ಭಾರತ್ ಮಾತಾ ಕಿ ಜೈ ಘೋಷಣೆ ಕೂಗುವುದಕ್ಕೆ ನಿರ್ಬಂಧ ಹೇರಲಾಗಿದೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳ ಬಾಯಿಂದ ಈ ಘೋಷಣೆ ಕೇಳಿ ಬಂದರೆ ಅಂತವರಿಗೆ ಶಿಕ್ಷೆಯನ್ನು ಕೂಡ ವಿಧಿಸಲಾಗುತ್ತದೆ.

ಬಲಿಯಾದ ಬಿಲ್ಥರಾರೋಡ್ ನಗರದ ಮಾಲಗೋದಾಮ್ ರಸ್ತೆಯಲ್ಲಿರುವ ಜಿಎಮ್ಎಎಮ್ (ಗಾಂಧಿ ಮೊಹಮ್ಮದ್ ಅಲಿ ಮೆಮೋರಿಯಲ್) ಇಂಟರ್ ಕಾಲೇಜಿನಲ್ಲಿ ಚಿತ್ರೀಕರಿಸಲಾದ ಅನೇಕ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಬಗ್ಗೆ ಪರಿಶೀಲಿಸಲು ಮಾನಸ ಮಂದಿರ ಎಂಬ ಸಂಸ್ಥೆಯ ಸಮಿತಿ ವ್ಯವಸ್ಥಾಪಕರಾದ ಶಿವಕುಮಾರ್ ಜೈಸ್ವಾಲ್ ಶಾಲೆಗೆ ಭೇಟಿ ನೀಡಿದಾಗ ವಿದ್ಯಾರ್ಥಿಗಳು ಭಾರತ್ ಮಾತಾ ಕಿ ಜೈ ಎಂದರೆ ಶಿಕ್ಷೆ ನೀಡಲಾಗುತ್ತದೆ ಎಂಬ ಸುದ್ದಿಯನ್ನು ಖಚಿತ ಪಡಿಸಿದ್ದಾರೆ.

ಶಾಲೆಯಲ್ಲಿ ಅರ್ಥಶಾಸ್ತ್ರ ಬೋಧಿಸುವ ಸಂಜಯ್ ಪಾಂಡೆ ಎಂಬ ಶಿಕ್ಷಕರು ಕೂಡ ಇದನ್ನು ಪುಷ್ಟೀಕರಿಸಿದ್ದು, ಶಾಲೆಯಲ್ಲಿ ದೇಶಭಕ್ತಿ ಘೋಷಣೆ ಕೂಗುವವರಿಗೆ ಶಿಕ್ಷೆ ನೀಡಲಾಗುತ್ತದೆ. ಶಾಲೆಯ ಅಧಿಕಾರ ಮುಸ್ಲಿಂ ಶಿಕ್ಷಕರ ಸುಪರ್ದಿಯಲ್ಲಿರುವುದರಿಂದ ಹೀಗಾಗುತ್ತಿದೆ. ಜಾವೇದ್ ಅಕ್ತರ್ ಎಂಬ ಶಿಕ್ಷಕರು ದೇಶಭಕ್ತಿ ಘೋಷಣೆ ಕೂಗಿದ್ದ ವಿದ್ಯಾರ್ಥಿಯೊಬ್ಬನನ್ನು ಇತ್ತೀಚೆಗೆ ಗಂಟೆಗಟ್ಟಲೆ ಕಡುಬಿಸಿಲಿನಲ್ಲಿ ನಿಲ್ಲಿಸಿದ್ದರು. ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಹೀಗೆಯೇ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಆದರೆ ಶಾಲೆಯ ಪ್ರಾಂಶುಪಾಲರಾದ ಮಜೀದ್ ಮಸೀರ್ ಅವರು ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದೇಶಭಕ್ತಿ ಭಾವನೆ ಬೆಳೆಸುವ ಕೆಲಸವನ್ನು ವಿಶೇಷವಾಗಿ ಮಾಡಲಾಗುತ್ತದೆ.ನಾನು ಕೂಡ ಸರಕಾರ ಆಯೋಜಿಸುವ ದೇಶಭಕ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ. ಅಕ್ಟೋಬರ್ 2ರಂದು ಆಯೋಜಿಸಲಾಗಿದ್ದ ಸ್ವಚ್ಛ ಭಾರತ ಅಭಿಯಾನದಲ್ಲೂ ನಾನು ಪಾಲ್ಗೊಂಡಿದ್ದೆ, ಎಂದಿದ್ದಾರೆ.

Comments are closed.