ಕರಾವಳಿ

ಶಬರಿಮಲೆ ತೀರ್ಪಿನ ವಿರುದ್ಧ ಅ.9ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಭೆ :

Pinterest LinkedIn Tumblr

ಕದ್ರಿ ಮೈದಾನದಲ್ಲಿ ಸೇರಲಿದ್ದಾರೆ ಸಹಸ್ರಾರು ಮಂದಿ

ಮಂಗಳೂರು: ಶಬರಿಮಲೆ ಪ್ರವೇಶ ಕುರಿತಂತೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಸುಪ್ರಿಂಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಬೃಹತ್ ಹೋರಾಟ ನಡೆಸಲು ಮಂಗಳೂರಿನ ಅಯ್ಯಪ್ಪ ಸೇವಾ ಸಮಿತಿ ನಿರ್ಧರಿಸಿದೆ.

ಹೋರಾಟದ ಪೂರ್ವಭಾವಿ ಸಭೆ ಶನಿವಾರ ನಗರದ ಸಂಘನಿಕೇತನದಲ್ಲಿ ನಡೆದಿದ್ದು, ಮೊದಲ ಹಂತವಾಗಿ ಅ.9ರಂದು ಸಂಜೆ 5 ಗಂಟೆಗೆ ಕದ್ರಿ ಮೈದಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ಹಿಂದು ಬಾಂಧವರು ಒಟ್ಟು ಸೇರಿ ಹೋರಾಟದ ರೂಪುರೇಷೆಯ ಸಭೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಭಜನೆಯ ಮೂಲಕ ಶ್ರೀ ಕ್ಷೇತ್ರ ಕದ್ರಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವ ನಿರ್ಧಾರಕ್ಕೆ ಸಮಿತಿ ಬಂದಿದೆ. ಸಭೆಯಲ್ಲಿ ಪಾಲ್ಗೊಂಡ ವಿವಿಧೆಡೆಯ ಅಯ್ಯಪ್ಪಸ್ವಾಮಿ ಭಕ್ತರು, ಸಂಘಟನೆಗಳ ಪ್ರಮುಖರು ಹಾಗೂ ಹಿಂದು ಬಾಂಧವರು ತಮ್ಮ ತಮ್ಮ ವ್ಯಾಪ್ತಿಯ ಪುಣ್ಯ ಕ್ಷೇತ್ರಗಳಲ್ಲಿ ಪೂಜೆ ಸಲ್ಲಿಸಿ ಆ ಬಳಿಕ 5 ಗಂಟೆಗೆ ಸರಿಯಾಗಿ ಕದ್ರಿ ಮೈದಾನದಲ್ಲಿ ಸೇರುವಂತೆ ಸೂಚಿಸಲಾಗಿದೆ.

ಪ್ರತಿಯೊಬ್ಬರೂ ತಮ್ಮ ತಮ್ಮ ವ್ಯಾಪ್ತಿಯಿಂದ ಸುಮಾರು 400-500 ಮಂದಿಯನ್ನು ಕರೆತರುವ ಭರವಸೆ ನೀಡಿದ್ದು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಭಕ್ತರ ಧಾರ್ಮಿಕ ಭಾವನೆಗೆ ಮೊದಲ ಅವಕಾಶ : ಪ್ರಕಾಶ್ ಪಿ.ಎಸ್

ಸಭೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪ್ರಕಾಶ್ ಪಿ.ಎಸ್., ಇಡೀ ದೇಶವನ್ನು ಒಗ್ಗೂಡಿಸಿದ ಶಕ್ತಿಯ ಕ್ಷೇತ್ರವೆಂದರೆ ಅದು ಶಬರಿಮಲೆ. ಅತ್ಯಂತ ಶ್ರದ್ಧಾ ಭಕ್ತಿಯಿಂದ ಕೋಟ್ಯಂತರ ಮಂದಿ ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ.

ಆದರೆ ಪರಂಪರೆಯಿಂದ ಬಂದ ಜನತೆಯ ನಂಬಿಕೆಗೆ ಧಕ್ಕೆ ತರುವ ಕೆಲಸ ಸುಪ್ರಿಂ ಕೋರ್ಟ್ ತೀರ್ಪಿನ ಮೂಲಕ ಆಗಿದೆ. ಕೇರಳ ಸರಕಾರ ತೀರ್ಪಿನ ಮರು ಪರಿಶೀಲನೆಗೆ ಸುಪ್ರಿಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲೇಬೇಕು. ಭಕ್ತರ ಧಾರ್ಮಿಕ ಭಾವನೆಗೆ ಮೊದಲ ಅವಕಾಶ ನೀಡಬೇಕು. ಅಷ್ಟರವರೆಗೆ ಹೋರಾಟ ನಿಲ್ಲಬಾರದು ಎಂದರು.

ಹಿಂದು ಸಮಾಜ ಮಹಿಳಾ ವಿರೋಧಿಯಲ್ಲ, ಶಬರಿಮಲೆಗೆ ಮಹಿಳೆಯರಿಗೆ ನಿಷೇಧವನ್ನೂ ಹೇರಿಲ್ಲ. ೧೦ನೇ ವಯಸ್ಸಿನೊಳಗಿನ ಮತ್ತು 50 ವರ್ಷ ಮೇಲ್ಪಟ್ಟ ಮಹಿಳೆಯರು ಶಬರಿ ಮಲೆಗೆ ಬರಲು ಹಿಂದಿನಿಂದಲೂ ಅವಕಾಶವಿದೆ. ಆದರೆ ಶಬರಿಮಲೆ ಏನೆಂದೇ ಗೊತ್ತಿರದ ಮಂದಿ ಕೋರ್ಟ್ ಮೆಟ್ಟಿಲೇರುವ ಮೂಲಕ ಪರಂಪರೆಗೆ ಪೆಟ್ಟು ನೀಡುವ ಕೆಲಸ ಮಾಡಿದ್ದಾರೆ.

ಹಿಂದು ಸಮಾಜವನ್ನು ಮುನ್ನಡೆಸಬೇಕಾದ ಸಂತ ಶ್ರೇಷ್ಟರ ಧಾರ್ಮಿಕ ವಿಚಾರದ ಕುರಿತು ನಿರ್ಧಾರ ತೆಗೆದುಕೊಳ್ಳುವಂತಾಗಬೇಕು ಎಂದವರು ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲ್, ವಿಶ್ವಹಿಂದು ಪರಿಷತ್ ದಕ್ಷಿಣ ಪ್ರಾಂತ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಆರೆಸ್ಸೆಸ್ ಮಹಾನಗರ ಸಂಘಚಾಲಕ್ ಸುನಿಲ್ ಆಚಾರ್, ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್ ಮತ್ತಿತರರು ಉಪಸ್ಥಿತರಿದ್ದರು.

ಬೃಹತ್ ಸಭೆಯ ವಿಶೇಷತೆ :

ಭಜನೆಗಾಗಿ ತಾಳದೊಂದಿಗೆ ಬರಲಿದ್ದಾರೆ ಭಕ್ತರು
ಕೇಸರಿ ಶಾಲಿನೊಂದಿಗೆ ಸಹಸ್ರಾರು ಸಂಖ್ಯೆಯಲಿ ಸೇರುವ ನಿರೀಕ್ಷೆ
ಬೃಹತ್ ಸಬೆಯ ಬಳಿಕ ಭಜನೆಯೊಂದಿಗೆ ಕದ್ರಿಗೆ ತೆರಳಿ ಪೂಜೆ ಸಲ್ಲಿಕೆ
ರಾಜ್ಯಪಾಲರು, ಕೇಂದ್ರಕ್ಕೆ ಮನವಿ ಸಲ್ಲಿಕೆ
ಹೋರಾಟಕ್ಕೆ ಹಿರಿಯರನ್ನೊಳಗೊಂಡ ಸೂಕ್ತ ಸಮಿತಿ ರಚನೆ

ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ : ರಾಜೇಶ್ -ಸಂಚಾಲಕರು ಅಯ್ಯಪ್ಪ ಸೇವಾ ಸಮಿತಿ ದಕ . Mobile- 9964142283

Comments are closed.